ರಾಯಚೂರು: ಕಾಂಗ್ರೆಸ್ ಪಕ್ಷದ ಒಳಜಗಳದಿಂದ ರಾಯಚೂರು ಅಭಿವೃದ್ಧಿ ಕುಂಠಿತಗೊಂಡಿದ್ದು, ನಗರದ ಶಾಸಕ ಡಾ.ಶಿವರಾಜ ಪಾಟೀಲ್ ನಿಷ್ಕ್ರೀಯರಾಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಟೀಕಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್‌ನಲ್ಲಿ ಶರಣಪ್ರಕಾಶ ಪಾಟೀಲ್ ಮತ್ತು ವಸಂತಕುಮಾರ ಒಂದು ಬಣದಲ್ಲಿದ್ದಾರೆ, ಮತ್ತೊಂದು ಬದಿಯಲ್ಲಿ ಬೋಸರಾಜು ಅವರ ಗುಂಪಿದೆ. ಈ ಬಣಗಳ ನಡುವಿನ ಆಂತರಿಕ ಕಲಹದಿಂದ ನಗರದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ವಿರೋಧ ಪಕ್ಷದವರು ಧ್ವನಿಯೆತ್ತಬೇಕಾಗಿದ್ದರೂ ಮೌನ ವಹಿಸಿದ್ದಾರೆ,” ಎಂದರು.
ಬಿಜೆಪಿ–ಜೆಡಿಎಸ್ ಮೈತ್ರಿ ಚುನಾವಣೆಗೆ ಮಾತ್ರ ಸೀಮಿತವಾಗಿದೆ. ಅಭಿವೃದ್ಧಿ ಪರವಾಗಿ ಕಾರ್ಯವಿಲ್ಲ. ಮೂರು ತಿಂಗಳ ಹಿಂದೆ ಜಿಲ್ಲಾ ಆಡಳಿತವು ದಲಿತ ಸಂಘಟನೆ ಮುಖಂಡರನ್ನು ಕರೆಯಿತ್ತು. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಜಗಜೀವನ್ ರಾಮ್ ವೃತ್ತಗಳ ಅಭಿವೃದ್ಧಿ, ಕೆರೆಗಳ ಸುಧಾರಣೆ, ಡಿವೈಡರ್ ನಿರ್ಮಾಣ ಮುಂತಾದ ವಿಚಾರಗಳಲ್ಲಿ ಚರ್ಚೆ ನಡೆಯಿತು. ಅಂಬೇಡ್ಕರ್ ವೃತ್ತ ಸೌಂದರ್ಯೀಕರಣಕ್ಕೆ ನೀಲನಕ್ಷೆ ತಯಾರಿಸಲಾಯಿತು, ಜಗಜೀವನ್ ರಾಮ್ ವೃತ್ತದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ ಶಿಫಾರಸು ಮಾಡಲಾಯಿತು,” ಎಂದು ವಿವರಿಸಿದರು.
“ನಗರಾಭಿವೃದ್ಧಿ ಪ್ರಾಧಿಕಾರದಿಂದ 40 ಕೋಟಿ ರೂಪಾಯಿ ಅನುದಾನದಲ್ಲಿ 18 ಕಾಮಗಾರಿಗಳನ್ನು ಕಳುಹಿಸಲಾಗಿತ್ತು. ಮೇ 14 ರಂದು ಅನುಮೋದನೆ ಸಿಕ್ಕರೂ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯದಿಂದ ಕೆಲಸ ಮುಂದುವರಿದಿಲ್ಲ. ಈ ಅಧಿಕಾರಿಯನ್ನು ರಕ್ಷಿಸುತ್ತಿರುವವರು ಡಾ.ಶರಣಪ್ರಕಾಶ ಪಾಟೀಲ್ ಮತ್ತು ಜಿಲ್ಲೆಯ ಮಂತ್ರಿ ಎನ್.ಎಸ್.ಬೋಸರಾಜು,” ಎಂದು ಆರೋಪಿಸಿದರು.
“ಶರಣಪ್ರಕಾಶ ಪಾಟೀಲ್‌ಗೆ ಮಳೆಯಿಂದಾದ ಹಾನಿಯ ಮಾಹಿತಿ ಇಲ್ಲ. ಬೋಸರಾಜು ಮಾವಿನ ಕೆರೆ ಒತ್ತುವರಿಗೆ ಸಹಕಾರ ನೀಡಿದ್ದಾರೆ. ರಾಯಚೂರಿನ ಅಭಿವೃದ್ಧಿಯ ವಿಷಯದಲ್ಲಿ ಇಬ್ಬರು ಮಂತ್ರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಸರ್ಕಲ್‌ನಲ್ಲಿ ಇವರ ವಿರುದ್ಧ ವಿನೂತನ ಪ್ರತಿಭಟನೆ ನಡೆಸಲಾಗುವುದು,” ಎಂದರು.
ಅವರು ಮುಂದುವರೆದು, “ವಾರಕ್ಕೊಮ್ಮೆ ಜೆಡಿಎಸ್ ಪಕ್ಷದ ವತಿಯಿಂದ ಜನರ ಸಮಸ್ಯೆಗಳನ್ನು ಆಲಿಸಿ, ಕೆರೆ ಒತ್ತುವರಿ ಕುರಿತು ದಾಖಲೆಗಳೊಂದಿಗೆ ಹೋರಾಟ ನಡೆಸಲಾಗುವುದು. ಈ ಆಂದೋಲನದಲ್ಲಿ ರಾಯಚೂರಿನ ಪ್ರತಿಯೊಬ್ಬರೂ ಭಾಗಿಯಾಗಬೇಕು,” ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನರಸಪ್ಪ, ನಾಗರಾಜ, ರಾಮು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಮೆಂಟ್ ಪೋಸ್ಟ್ ಮಾಡಿ