Top News

ಬಸ್ ನಿಲ್ದಾಣದ ಶೌಚಾಲಯಗಳಲ್ಲಿ ವಸೂಲಿ: 3 ರೂಪಾಯಿಗೆ ಬದಲು 10 ರೂಪಾಯಿ ವಸೂಲಿ ಆರೋಪ..?


ರಾಯಚೂರು: ಜಿಲ್ಲೆಯ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಶೌಚಾಲಯ ಮತ್ತು ಮೂತ್ರಾಲಯಗಳ ಬಳಕೆಗಾಗಿ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರಾಯಚೂರು ಕೇಂದ್ರ ಬಸ್ ನಿಲ್ದಾಣದ ಜೊತೆಗೆ ತಾಲೂಕು ಬಸ್ ನಿಲ್ದಾಣಗಳಲ್ಲಿಯೂ ಈ ಅಕ್ರಮ ವಸೂಲಿ ದಿನನಿತ್ಯ ನಡೆಯುತ್ತಿದೆ ಎಂಬುದು ಸ್ಥಳೀಯ ನಾಗರಿಕರ ಆರೋಪ.

ಸಾರಿಗೆ ನಿಗಮದ ನಿಯಮ ಪ್ರಕಾರ ಶೌಚ ಸೇವೆಗೆ ಕೇವಲ 3 ರೂಪಾಯಿ ಮತ್ತು ಮೂತ್ರ ವಿಸರ್ಜನೆಗೆ ಉಚಿತ ಸೇವೆ ನೀಡಬೇಕು ಎಂದು ಬೋರ್ಡ್‌ಗಳು ಅಳವಡಿಸಲಾಗಿದೆ. ಆದರೆ ಶೌಚಾಲಯ ನಿರ್ವಹಣೆಗಾರರು ಪ್ರತಿಯೊಬ್ಬರಿಂದ 10 ರೂಪಾಯಿ ವಸೂಲಿ ಮಾಡುತ್ತಿದ್ದು, ಮಹಿಳೆಯರಿಗೆ ಉಚಿತ ಸೇವೆಯೂ ಕಾಗದದಲ್ಲೇ ಉಳಿದಿದೆ ಎಂದು ಆರೋಪಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಸ್ಥಳೀಯ ಪ್ರಜ್ಞಾವಂತ ನಾಗರಿಕರು, “ನಿಯಮಾನುಸಾರ ಹಣ ಪಡೆಯಿರಿ” ಎಂದು ಕೇಳಿದಾಗ, ಶೌಚಾಲಯದ ಸಿಬ್ಬಂದಿ “ಇದು ಟೆಂಡರ್ ಪಡೆದ ಮಾಲೀಕರ ಆದೇಶ, ಅದಕ್ಕೆ ನಾವು 10 ರೂಪಾಯಿ ವಸೂಲಿ ಮಾಡುತ್ತೇವೆ” ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಯಚೂರು ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಒಳಜಗಳ, ಅಧಿಕಾರಿಗಳ ನಿರ್ಲಕ್ಷ್ಯ: ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ

ಪ್ರತಿದಿನ ರಾಯಚೂರು ಬಸ್ ನಿಲ್ದಾಣದಿಂದ ಮಾತ್ರ ಸುಮಾರು ₹12,000 ವಸೂಲಿ ಆಗುತ್ತಿದ್ದು, ಒಂದು ತಾಲೂಕು ಬಸ್ ನಿಲ್ದಾಣದಿಂದ ₹6,000 ವರೆಗೆ ಸಂಗ್ರಹಣೆ ನಡೆಯುತ್ತಿದೆ. ಜಿಲ್ಲೆಯ ಆರು ತಾಲೂಕು ಬಸ್ ನಿಲ್ದಾಣಗಳನ್ನು ಸೇರಿಸಿದರೆ ಪ್ರತಿದಿನ ₹48,000, ತಿಂಗಳಿಗೆ ಸುಮಾರು ₹14 ಲಕ್ಷ ಹಣ ಸಂಗ್ರಹಣೆ ಆಗುತ್ತಿದೆ ಎಂದು ಆರೋಪಿಸಲಾಗಿದೆ.

ಆದರೆ, ಟೆಂಡರ್ ಪಡೆದವರು ಸಾರಿಗೆ ನಿಗಮಕ್ಕೆ ತಿಂಗಳಿಗೆ ಕೇವಲ ₹5 ಲಕ್ಷ ಪಾವತಿಸುತ್ತಿದ್ದು, ಉಳಿದ ₹9 ಲಕ್ಷ ಅವರ ಶುದ್ಧ ಆದಾಯವಾಗುತ್ತಿದೆ. ಕೂಲಿ ಕಾರ್ಮಿಕರ ವೇತನ ಕೊಟ್ಟ ನಂತರವೂ ತಿಂಗಳಿಗೆ ಸುಮಾರು ₹7 ಲಕ್ಷ ಲಾಭ ಆಗುತ್ತಿದೆ ಎನ್ನಲಾಗಿದೆ.

ಈ ಅಕ್ರಮ ವಸೂಲಿ ಮತ್ತು ಜನರಿಂದ ನಡೆಯುತ್ತಿರುವ ಹಗಲು ದರೋಡೆಯ ಹಿಂದೆ ಕೆಲವು ಸಾರಿಗೆ ನಿಗಮದ ಅಧಿಕಾರಿಗಳ ಸಹಕಾರವಿದೆ ಎಂಬ ಶಂಕೆಯೂ ವ್ಯಕ್ತವಾಗಿದೆ.

ಪ್ರಜ್ಞಾವಂತ ನಾಗರಿಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಟೆಂಡರ್ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಟೆಂಡರ್ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Post a Comment

ನವೀನ ಹಳೆಯದು