
ರಾಯಚೂರು: ನಗರವನ್ನು ಸ್ವಚ್ಛ ಹಾಗೂ ಹಸಿರುಗೊಳಿಸುವ ಉದ್ದೇಶದಿಂದ ರಾಯಚೂರು ನಗರ ಪಾಲಿಕೆ ವತಿಯಿಂದ “ಸಿಟಿ ಫಾರ್ ಯೂತ್ ಅಂಡ್ ಯೂತ್ ಫಾರ್ ಸಿಟಿ” ಯೋಜನೆಯಡಿ ಇಂದು ಬೆಳಿಗ್ಗೆ ‘ರಾಯಚೂರು ಮ್ಯಾರಥಾನ್’ ಕಾರ್ಯಕ್ರಮ ಆಯೋಜಿಸಲಾಯಿತು.
ನಗರದ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರಬಾಬು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ್ ನಾಯಕ ಚಾಲನೆ ನೀಡಿದರು. ‘ಭವಿಷ್ಯದ ಸ್ವಚ್ಛ ಮತ್ತು ಹಸಿರು ರಾಯಚೂರಿಗಾಗಿ ರಾಯಚೂರು ಭರವಸೆಯ ಓಟ’ ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾದ ಈ ಓಟದಲ್ಲಿ ಯುವಕರು ಉತ್ಸಾಹದಿಂದ ಭಾಗವಹಿಸಿ ಸ್ವಚ್ಛತೆಯ ಸಂದೇಶ ಸಾರಿದರು.
ಓಟವು ಬೆಳಗ್ಗೆ 6 ಗಂಟೆಗೆ ಪ್ರಾರಂಭಗೊಂಡು, ಓಟಗಾರರು ಕ್ರೀಡಾಂಗಣದಿಂದ ಪ್ರಾರಂಭಿಸಿ ಅಂಬೇಡ್ಕರ್ ವೃತ್ತ, ಸ್ಟೇಷನ್ ವೃತ್ತ, ನವೀನ್ ಆಸ್ಪತ್ರೆ ಮಾರ್ಗವಾಗಿ ಮರಳಿ ಸ್ಟೇಷನ್ ಸರ್ಕಲ್, ಕ್ರೀಡಾಂಗಣದವರೆಗೆ ಓಟವನ್ನು ಪೂರ್ಣಗೊಳಿಸಿದರು.
ಈ ಮ್ಯಾರಥಾನ್‌ನಲ್ಲಿ 17 ರಿಂದ 35 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದು, ಯುವಜನರ ಉತ್ಸಾಹದಿಂದ ಕಾರ್ಯಕ್ರಮಕ್ಕೆ ಹಬ್ಬದ ವಾತಾವರಣ ಸೃಷ್ಟಿಯಾಯಿತು. ವಿಜೇತರಿಗೆ ನಗದು ಬಹುಮಾನಗಳನ್ನೂ ನೀಡಲಾಗಿದ್ದು — ಮೊದಲ ಸ್ಥಾನಕ್ಕೆ ₹5,000, ಎರಡನೇ ಸ್ಥಾನಕ್ಕೆ ₹3,500 ಹಾಗೂ ಮೂರನೇ ಸ್ಥಾನಕ್ಕೆ ₹2,500 ನೀಡಲಾಯಿತು.
ಕಾರ್ಯಕ್ರಮವನ್ನು ರಾಯಚೂರು ನಗರ ಪಾಲಿಕೆ ಆಯೋಜಿಸಿದ್ದು, ಯುವಶಕ್ತಿ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕ ಸಹಯೋಗ ನೀಡಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣಾಧಿಕಾರಿ ಡಾ. ಶಾಕೀರ್ ಮೊಯಿನುದ್ದಿನ್, ವಿಜ್ಞಾನ ಕೇಂದ್ರದ ಅಜಿತ್ ಅಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಕಾಮೆಂಟ್ ಪೋಸ್ಟ್ ಮಾಡಿ