ರಾಯಚೂರು: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆ, ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಂಚಿಕೆ ಕುರಿತ ಚರ್ಚೆಗಳು ಜೋರಾಗಿರುವ ನಡುವೆಯೇ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಚಿವ ಸಂಪುಟ ವಿಸ್ತರಣೆ ಡಿಸೆಂಬರ್ ವೇಳೆಗೆ ನಡೆಯುವ ಸಾಧ್ಯತೆ ಇದೆ. ಅನೇಕ ಹಿರಿಯರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಸೂಚ್ಯವಾಗಿ ಮಾತನಾಡಿದ್ದಾರೆ. ಎಲ್ಲ ಅಂಶಗಳನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ” ಎಂದರು.
ಮುಖ್ಯಮಂತ್ರಿಗಳು ಅಧಿಕಾರ ಬಿಟ್ಟು ಕೊಡುವ ವಿಚಾರದಲ್ಲಿ ಯಾವುದೇ ಮಾತುಕತೆ ನಡೆದಿಲ್ಲವೆಂದು ಸ್ಪಷ್ಟಪಡಿಸಿದ ಅವರು, “ಈ ಬಗ್ಗೆ ಯಾರಿಗೂ ಖಚಿತ ಮಾಹಿತಿ ಇಲ್ಲ. ಎಲ್ಲರೂ ಊಹಾಪೋಹಗಳಲ್ಲಿ ಮಾತನಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ ಅವರಿಗೆ ಅಧಿಕಾರ ಹಂಚಿಕೆ ಕುರಿತ ಚರ್ಚೆಯೇ ಆಗಿಲ್ಲ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು ಹಲವರು ಇದ್ದಾರೆ. ಹೀಗಾಗಿ ಇಂತಹ ಮಾತುಗಳು ಸಹಜ” ಎಂದು ಹೇಳಿದರು.
ಸಚಿವ ಸ್ಥಾನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಮುಖ್ಯಮಂತ್ರಿಗಳೇ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಾನು ಸಚಿವರಾಗುವ ಅವಕಾಶವಿಲ್ಲ” ಎಂದರು.
ಮಾಜಿ ಸಂಸದ ಪ್ರತಾಪಸಿಂಹ ಕುರಿತು ಮಾತನಾಡಿದ ಅವರು, “ಅವರು ಅಪ್ರಸ್ತುತ ರಾಜಕಾರಣಿ. ಅವರ ಮಾತಿಗೆ ಅವರದೇ ಪಕ್ಷ ಕಿವಿಗೊಡುತ್ತಿಲ್ಲ. ಹೀಗಿರುವಾಗ ನಾವೇಕೆ ಅವರ ಮಾತಿಗೆ ಬೆಲೆ ಕೊಡಬೇಕು?” ಎಂದು ಪ್ರಶ್ನಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿರುದ್ಧ ಮುನಿರತ್ನ ಅವರ ಆರೋಪವನ್ನು ತಿರಸ್ಕರಿಸಿ, “ಡಿ.ಕೆ.ಶಿವಕುಮಾರ್ ಹಿರಿಯ ನಾಯಕರು. ಅವರಿಗೆ ಶಿಷ್ಟಾಚಾರ ಗೊತ್ತಿದೆ. ಯಶವಂತಪುರ ಕ್ಷೇತ್ರದಲ್ಲಿ ನಡೆದ ‘ಬೆಂಗಳೂರು ನಡೆ’ ಕಾರ್ಯಕ್ರಮವನ್ನು ಅವರು ಶಿಷ್ಟಾಚಾರದಂತೆ ನಡೆಸಿದ್ದಾರೆ. ಮುನಿರತ್ನ ಅವರಿಗೆ ತಮ್ಮ ಕ್ಷೇತ್ರದ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ, ಕರೆಯಲಿ ಬಿಡಲಿ ಅವರು ಸ್ವತಃ ಭಾಗವಹಿಸಬೇಕಿತ್ತು. ಹೀಗಿರುವಾಗ ಆಕ್ಷೇಪ ವ್ಯಕ್ತಪಡಿಸುವ ಅಗತ್ಯವೇ ಇರಲಿಲ್ಲ” ಎಂದರು.
ಕುರುಬ ಸಮಾಜಕ್ಕೆ ಮೀಸಲಾತಿ ಕುರಿತು ಮಾತನಾಡಿದ ಅವರು, “ಕೊಪ್ಪಳ, ಬೀದರ್, ಯಾದಗಿರಿ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಎಸ್‌ಟಿ ಮೀಸಲು ನೀಡುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ವಿಷಯ ಈಗ ಕೇಂದ್ರ ಸರ್ಕಾರದ ಪರಿಗಣನೆಯಲ್ಲಿದೆ. ತೀರ್ಮಾನ ಕೈಗೊಳ್ಳುವ ಅಧಿಕಾರ ಕೇಂದ್ರದದು” ಎಂದರು.
“ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿದೆ. ಎಲ್ಲ ಸಮುದಾಯಗಳಿಗೂ ನ್ಯಾಯ ದೊರಕುವಂತೆ ನಿಗಮ ಮಂಡಳಿಗಳಲ್ಲಿ ಪ್ರಾತಿನಿಧ್ಯ ನೀಡಲು ಯತ್ನಿಸುತ್ತಿದ್ದೇವೆ. ಕೆಲವೊಮ್ಮೆ ರಾಜಕೀಯ ಒತ್ತಡದಿಂದ ಬದಲಾವಣೆಗಳು ನಡೆಯುವುದು ಸಹಜ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಮುಖಂಡರಾದ ಹನುಮಂತಪ್ಪ ಜಾಲಿಬೆಂಚಿ, ಶೇಖರ ವಾರದ, ಅಯ್ಯಣ್ಣ ವಡವಾಟಿ, ನಾಗವೇಣಿ ಪಾಟೀಲ್, ಮಲ್ಲಿಕಾರ್ಜುನ ಏಗನೂರು ಸೇರಿ ಅನೇಕರು ಉಪಸ್ಥಿತರಿದ್ದರು.

ಕಾಮೆಂಟ್ ಪೋಸ್ಟ್ ಮಾಡಿ