Top News

ಆರ್‌ಎಸ್‌ಎಸ್‌ನಿಂದ ದೇಶದ ಮೇಲೆ ನಿರಂತರ ದಬ್ಬಾಳಿಕೆ: ಎ. ವಸಂತಕುಮಾರ

ರಾಯಚೂರು: ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಲು ಪತ್ರ ಬರೆದಿರುವುದಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ ತಿಳಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

“ಆರ್‌ಎಸ್‌ಎಸ್ ಸಂಸ್ಥೆಯು ಸ್ಥಾಪನೆಯಾದ ನೂರು ವರ್ಷಗಳಿಂದಲೂ ದೇಶದ ಒಳಗೆ ಅನೇಕ ಅವಘಡಗಳಿಗೆ ಕಾರಣವಾಗಿದೆ. ಅವರ ಧ್ಯೇಯವೇ ಹಿಂದೂ ರಾಷ್ಟ್ರ ನಿರ್ಮಾಣ. ಸರ್ಕಾರಿ ಸ್ಥಳಗಳಲ್ಲಿ ಧ್ವಜ ಹಾರಿಸಿ, ಯುವಕರನ್ನು ಸಂಘಟಿಸುವ ಹೆಸರಿನಲ್ಲಿ ಧರ್ಮೀಯ ಅಸಹಿಷ್ಣುತೆ ಮತ್ತು ಸಾಮಾಜಿಕ ಅಶಾಂತಿ ಉಂಟುಮಾಡುತ್ತಿದೆ,” ಎಂದು ಆರೋಪಿಸಿದರು.

ವಸಂತಕುಮಾರ ಅವರು ಮುಂದುವರಿದು, “ಪ್ರಿಯಾಂಕ್ ಖರ್ಗೆಯವರ ಪತ್ರವು ವಾಸ್ತವದ ಪ್ರತಿಬಿಂಬ. ಸರ್ಕಾರದ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳು ನಡೆಯಬಾರದೆಂಬ ಮಾತು ನ್ಯಾಯಸಮ್ಮತ. ಬಿಜೆಪಿ ನಾಯಕರು ವಿಷಯದ ನಿಜಸ್ವರೂಪ ಅರಿತು ಮಾತನಾಡಬೇಕು,” ಎಂದು ಸಲಹೆ ನೀಡಿದರು.

ಅವರು ತಮಿಳುನಾಡು ಉದಾಹರಣೆ ನೀಡಿ, “ಅಲ್ಲಿ ಈಗಾಗಲೇ ಆರ್‌ಎಸ್‌ಎಸ್ ನಿಷೇಧಿಸಲಾಗಿದೆ. ದೇಶದಲ್ಲಿ ಧರ್ಮೀಯ ಅಸಹನತೆ ಮತ್ತು ವಿಷ ಬಿತ್ತುವ ಕೆಲಸ ಈ ಸಂಘಟನೆ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೆ ಬ್ರಿಟೀಷರಿಗೆ ಸಹಕರಿಸಿದ್ದ ಆರ್‌ಎಸ್‌ಎಸ್ ಹಾಗೂ ಬಿಜೆಪಿ ರಾಷ್ಟ್ರಪ್ರೇಮದ ನಿಜ ಅರ್ಥವನ್ನು ಕಲಿಯಬೇಕು,” ಎಂದು ಕಟುವಾಗಿ ಟೀಕಿಸಿದರು.

ಆರ್‌ಎಸ್‌ಎಸ್ ವಿರುದ್ಧ ಜನರ ವಿರೋಧ ಹಲವು ವರ್ಷಗಳಿಂದ ನಡೆಯುತ್ತಿದ್ದಂತೆಯೇ ಸರ್ಕಾರ ಈಗ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

“ಆರ್‌. ಅಶೋಕ ಅವರಂತೆ ದಮ್ಮು ತಾಕತ್ತು ಇದ್ದರೆ ಸಂಘಟನೆ ನಿಷೇಧಿಸಿ ತೋರಲಿ. ಹಿಂದೆ ನಿಷೇಧಿಸಲಾಗಿತ್ತು — ಮುಂದೆಯೂ ಸಾಧ್ಯವಿದೆ,” ಎಂದು ವಸಂತಕುಮಾರ ಸವಾಲು ಹಾಕಿದರು.

ಕಾರ್ಯಕ್ರಮದಲ್ಲಿ: ಬಸವರಾಜ ಪಾಟೀಲ್ ಇಟಗಿ, ಡಾ. ರಜಾಕ್ ಉಸ್ತಾದ್, ಅಬ್ದುಲ್ ಕರೀಂ, ತಲಕಾಯಿ ಮಾರೆಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Post a Comment

ನವೀನ ಹಳೆಯದು