Top News

ಹಳೆಯದನ್ನು ಮರೆಯದೇ ಆಧುನಿಕತೆಗೆ ತೊಡಗಿಸಿಕೊಳ್ಳೋಣ- ಸಂಸದ ಜಿ. ಕುಮಾರ ನಾಯಕ

ರಾಯಚೂರು: ಮಹರ್ಷಿ ವಾಲ್ಮೀಕಿ ಕೇವಲ ಒಂದು ಸಮುದಾಯದವರಲ್ಲ, ಇಡೀ ದೇಶದವರಾದ ಮಹಾನ್ ವ್ಯಕ್ತಿ. ಭಾರತೀಯ ಸಂಸ್ಕೃತಿಗೆ ಸಂವಿಧಾನವನ್ನು ನೀಡಿದವರು, ‘ರಾಮಾಯಣ’ದ ಮೂಲಕ ರಾಜ, ಮಂತ್ರಿ ಹಾಗೂ ಪ್ರಜೆಗಳ ಕರ್ತವ್ಯವನ್ನು ವಿವರಿಸಿದವರು ಎಂದು ಸಂಸದ ಜಿ. ಕುಮಾರ ನಾಯಕ ಹೇಳಿದರು.

ಅವರಿಂದು ನಗರದ ಆಶಾಪೂರ ರಸ್ತೆಯಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಹಳೆಯದನ್ನು ಮರೆಯಬಾರದು, ಅದನ್ನೆ ನೆನಪಿಟ್ಟು ಆಧುನಿಕತೆಗೆ ತೊಡಗಿಸಿಕೊಳ್ಳಬೇಕು. ಎಲ್ಲರೂ ಒಂದೇ ಜನಾಂಗವಾಗಿ ಸಮಾಜದ ಉನ್ನತಿಗಾಗಿ ಕೆಲಸ ಮಾಡಬೇಕು. ಸಾರ್ವಜನಿಕರ ಸಹಕಾರ ಮತ್ತು ಸಲಹೆ ಅತ್ಯಂತ ಮುಖ್ಯ. ಶಿಕ್ಷಣದ ಮೂಲಕ ಉನ್ನತ ಸ್ಥಾನಕ್ಕೆ ತಲುಪುವ ದೃಢ ಸಂಕಲ್ಪ ಎಲ್ಲರಲ್ಲಿರಬೇಕು ಎಂದರು.


ಪರಿಶಿಷ್ಟ ವರ್ಗದ ಮಕ್ಕಳಿಗೆ ದೇಶಾದ್ಯಂತ 150 ಕೋಟಿಗೂ ಹೆಚ್ಚು ಅನುದಾನ ಬೇಕಿತ್ತು, ಆದರೆ ಕೆಲವೇ ಲಕ್ಷ ಮಾತ್ರ ನೀಡಲಾಗಿತ್ತು. ರಾಯಚೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನ ಮನವಿಯ ಮೇರೆಗೆ ವಿಷಯ ನನ್ನ ಗಮನಕ್ಕೆ ಬಂದ ನಂತರ ಈಗ 120 ಕೋಟಿ ರೂ. ಅನುದಾನ ಮಂಜೂರಾಗಿದೆ. ವಾಲ್ಮೀಕಿ ಭವನದ ಅಭಿವೃದ್ಧಿಗೆ 50 ಲಕ್ಷ ರೂ. ಸಂಸದರ ಅನುದಾನದಿಂದ ನೀಡಲಾಗುವುದು ಎಂದರು.


ಇದೇ ವೇಳೆ ನಗರ ಶಾಸಕ ಡಾ. ಶಿವರಾಜ ಪಾಟೀಲ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಗತ್ತಿನ ಮೊದಲ ಕವಿ. ಸುಮಾರು 12 ಸಾವಿರ ವರ್ಷಗಳ ಹಿಂದೆ ರಾಮಾಯಣ ಬರೆದು ಸಂಬಂಧಗಳ ಮಹತ್ವವನ್ನು ತಿಳಿಸಿಕೊಟ್ಟರು. ರಾಯಚೂರು ಭಾಗದಲ್ಲೂ ಪರಿಶಿಷ್ಟ ವರ್ಗದ ಜನರ ಕೊಡುಗೆ ಅಪಾರವಾಗಿದೆ. ವ್ಮೀಕಿ ಅವರ ಥ್ವಾದರ್ಶಗಳಿಂದ ಸಮಾಜದಲ್ಲಿ ಸಮಾನತೆ ನೆಲೆಸಬೇಕು. ವಾಲ್ಮೀಕಿ ಭವನದಲ್ಲಿ ಸುಸಜ್ಜಿತ ವ್ಯವಸ್ಥೆ ಅಗತ್ಯ ಎಂದು ಹೇಳಿದರು.


ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ನಿತೀಶ, ಎಸ್ಪಿ ಎಂ. ಪುಟ್ಟಮಾದಯ್ಯ, ಉಪನ್ಯಾಸಕ ವೇಣುಗೋಪಾಲ ನಾಯಕ, ಚನ್ನಬಸವ ನಾಯಕ, ಪ್ರಭು ಹುಲಿನಾಯಕ, ತಾಯಣ್ಣ ನಾಯಕ, ನಾಗಪ್ಪ, ಪಾಂಡುರಂಗ ನಾಯಕ, ಭೀಮರಾವ್ ನಾಯಕ, ವೆಂಕಟೇಶ ನಾಯಕ, ರಘುವೀರ ನಾಯಕ, ನಾರಾಯಣ ನಾಯಕ, ಶಿವಪ್ಪ ನಾಯಕ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ಮಲ್ಲಿಕಾರ್ಜುನ, ವೆಂಕಟೇಶ ನಾಯಕ ಅಸ್ಕಿಹಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Post a Comment

ನವೀನ ಹಳೆಯದು