ರಾಯಚೂರು: ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುವುದು ಪ್ಯಾರಾಮೆಡಿಕಲ್ ತರಬೇತಿ ಪಡೆದ ವಿದ್ಯಾರ್ಥಿಗಳೇ. ಇವರು ತಮ್ಮ ಸೇವೆಯಿಂದ ಜಗತ್ತಿನ ಗಮನ ಸೆಳೆದಿದ್ದಾರೆ. “ಪ್ಯಾರಾಮೆಡಿಕಲ್ ಸಿಬ್ಬಂದಿ ಎರಡನೇ ವೈದ್ಯರಂತವರು” ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಹೇಳಿದರು.
ನಗರದ ಪಂ. ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಎಸ್.ಕೆ.ಇ. ಕಲ್ಯಾಣ ಕರ್ನಾಟಕ ಪ್ಯಾರಾಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಹಾಗೂ ಆತ್ಮೀಯ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರಾಯಚೂರು ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ಎಸ್.ಕೆ.ಇ. ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಇದು ಸಂಸ್ಥೆಯ ಅಧ್ಯಕ್ಷ ಡಾ. ಬಾಬುರಾವ ಶೆಗುಣಿಸಿಯವರ ಶ್ರಮದ ಫಲ. ಅವರು ವಿದ್ಯಾರ್ಥಿಗಳಿಗೆ ಉತ್ತಮ ಶಿಸ್ತು ಮತ್ತು ತರಬೇತಿ ನೀಡಿ ಜೀವನ ಕಟ್ಟಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
“ಆರೋಗ್ಯ ಕ್ಷೇತ್ರದಲ್ಲಿ ವೈದ್ಯರಿಗೆ ಬೆಂಬಲ ನೀಡುವಲ್ಲಿ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಪಾತ್ರ ಅಮೂಲ್ಯ. ಲ್ಯಾಬ್ ಟೆಕ್ನಾಲಜಿ, ರೇಡಿಯಾಲಜಿ, ಆಪ್ಟೋಮೆಟ್ರಿ, ಡಯಾಲಿಸಿಸ್ ಮೊದಲಾದ ವಿಭಾಗಗಳಲ್ಲಿ ತರಬೇತಿ ಪಡೆದವರು ಆರೋಗ್ಯ ಸೇವೆಗೆ ಬೆನ್ನೆಲುಬಿನಂತಿದ್ದಾರೆ. ಅವರ ಸಹಕಾರವಿಲ್ಲದೆ ವೈದ್ಯಕೀಯ ಸೇವೆ ನಿರ್ವಹಿಸುವುದು ಕಷ್ಟ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ. ರಝಾಕ ಉಸ್ತಾದ, ಡಾ. ಬಾಬುರಾವ ಶೆಗುಣಿಸಿಯವರ ನೇತೃತ್ವದಲ್ಲಿ ಎಸ್.ಕೆ.ಇ. ಸಂಸ್ಥೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಹಾಗೂ ಅವಕಾಶಗಳನ್ನು ಒದಗಿಸಿದೆ. ಪ್ಯಾರಾಮೆಡಿಕಲ್ ತರಬೇತಿ ಪಡೆದವರು ದೇಶವಿದೇಶಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಯಚೂರು ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿದ್ದರೂ, ಸರ್ಕಾರ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣ ಪಡೆದು ಜೀವನ ಕಟ್ಟಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ. ಅಸ್ಲಂ ಪಾಶಾ ಮಾತನಾಡಿ ಶುಭಾಶಯಗಳನ್ನು ತಿಳಿಸಿದರು.
ಕಾಲೇಜಿನ ಅಧ್ಯಕ್ಷ ಡಾ. ಬಾಬುರಾವ ಶೆಗುಣಿಸಿ ಸಂಸ್ಥೆಯ ಬೆಳವಣಿಗೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರೊ. ವೆಂಕಣ್ಣ, ಶರಣಪ್ಪ ಅಸ್ಕಿಹಾಳ, ಡಾ. ಭಾಸ್ಕರ ರೆಡ್ಡಿ, ಕಾಲೇಜಿನ ಉಪನ್ಯಾಸಕರು ಹಾಗೂ ಇತರರು ಉಪಸ್ಥಿತರಿದ್ದರು.

ಕಾಮೆಂಟ್ ಪೋಸ್ಟ್ ಮಾಡಿ