ರಾಯಚೂರು: ದೇಶದಾದ್ಯಂತ ವಿದ್ಯುತ್ ಗ್ರಾಹಕರ ಹಕ್ಕುಗಳ ಪರ ಹೋರಾಟ ನಡೆಸುತ್ತಿರುವ ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘ ಇದೀಗ ದಕ್ಷಿಣ ಭಾರತ ವಲಯದ ಗ್ರಾಹಕರ ಸಮಾವೇಶವನ್ನು ಅಕ್ಟೋಬರ್ 26, 2025 ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳುತ್ತಿದೆ ಎಂದು ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘದ ರಾಜ್ಯಾಧ್ಯಕ್ಷ ಕೆ. ವೇಣುಗೋಪಾಲ್ ಭಟ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಕ್ಷೇತ್ರದ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ಯೋಜನೆಗಳ ವಿರುದ್ಧ ಹೋರಾಟವನ್ನು ಬಲಪಡಿಸುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದ್ದು, ಆಂಧ್ರಪ್ರದೇಶ, ಕೇರಳ, ಕರ್ನಾಟಕ, ಪುದುಚೇರಿ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಗ್ರಾಹಕರ ಪ್ರತಿನಿಧಿಗಳು ಹಾಗೂ ಬುದ್ಧಿಜೀವಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಾವೇಶವನ್ನು ಆಲ್ ಇಂಡಿಯಾ ಎಲೆಕ್ಟ್ರಿಸಿಟಿ ಕಂಜೂಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಸ್ವಪನ್ ಘೋಷ್ ಉದ್ಘಾಟಿಸಲಿದ್ದು, ಮಾಜಿ ಐಎಎಸ್ ಅಧಿಕಾರಿ ಹಾಗೂ ಹರಿಯಾಣ ವಿದ್ಯುತ್ ಮಂಡಳಿಯ ಮಾಜಿ ಅಧ್ಯಕ್ಷ ಎಂ.ಜಿ. ದೇವಸಹಾಯಂ, ಆಂಧ್ರದ ಮಾಜಿ ಸಂಸದ ವಡ್ಡೆ ಸೋಭನಾದ್ರಿಶ್ವರ ರಾವ್, ತಮಿಳುನಾಡು ಪವರ್ ಎಂಜಿನಿಯರ್ಸ್ ಸೊಸೈಟಿ ಅಧ್ಯಕ್ಷ ಎಸ್. ಗಾಂಧಿ, ಕೇರಳದ ಜನಕೀಯ ಪ್ರತಿರೋಧ ಸಮಿತಿ ಉಪಾಧ್ಯಕ್ಷ ಬಿ. ದಿಲೀಪನ್ ಮತ್ತಿತರ ಗಣ್ಯರು ಅತಿಥಿ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಈ ಸಮಾವೇಶಕ್ಕೆ ಎಐಇಸಿಎ ಪ್ರಧಾನ ಕಾರ್ಯದರ್ಶಿ ಕೆ. ವೇಣುಗೋಪಾಲ್ ಭಟ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಾಧ್ಯಕ್ಷ ಸಮರ್ ಸಿನ್ಹಾ, ಉಪಾಧ್ಯಕ್ಷ ಕೆ. ಸೋಮಶೇಖರ್, ಖಜಾಂಚಿ ಅಜಯ್ ಚಟರ್ಜಿ ಹಾಗೂ ದಕ್ಷಿಣ ಭಾರತದ ವಿವಿಧ ರಾಜ್ಯ ಘಟಕಗಳ ಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ.
ವಿದ್ಯುತ್ ಜನರ ಹಕ್ಕು, ಅದು ವ್ಯಾಪಾರದ ವಸ್ತುವಾಗಬಾರದು. ಸ್ಮಾರ್ಟ್ ಮೀಟರ್, ಪ್ರಿಪೇಯ್ಡ್ ಮೀಟರ್, ಟಿಓಡಿ ಕ್ರಮಗಳಿಂದ ಜನರ ಮೇಲಿನ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಈ ಅನ್ಯಾಯದ ನೀತಿಗಳ ವಿರುದ್ಧ ಎಲ್ಲ ವರ್ಗದ ಜನರು ಒಂದಾಗಿ ಹೋರಾಡಬೇಕು ಎಂದು ಭಟ್ ಹೇಳಿದರು.
ರಾಜ್ಯದ ಕಾರ್ಮಿಕರು, ರೈತರು, ಯುವಕರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಿಗಳು ಹಾಗೂ ಹಿರಿಯ ನಾಗರಿಕರು ಈ ಹೋರಾಟಕ್ಕೆ ಬೆಂಬಲ ನೀಡಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಣ್ಣಪ್ಪ, ವೀರಪ್ಪ, ಅಬ್ದುಲ್ ಸುಬಾನ್, ನರಸಪ್ಪ, ಪಾಂಡುರಂಗ ಸೇರಿದಂತೆ ಸಂಘದ ಹಲವು ಸದಸ್ಯರು ಉಪಸ್ಥಿತರಿದ್ದರು.
ಕಾಮೆಂಟ್ ಪೋಸ್ಟ್ ಮಾಡಿ