Top News

ಚನ್ನಬಸವ ಕೊಟಗಿಯವರಿಗೆ ರಾಷ್ಟ್ರೀಯ ಸಾಧಕ ಪ್ರಶಸ್ತಿ–2025 ಗೌರವ

ಗಂಗಾವತಿ: ಪತ್ರಕರ್ತ ಚನ್ನಬಸವ ಕೊಟಗಿಯವರು ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ, ಬೆಂಗಳೂರು ಗ್ಲೋಬಲ್ ಎಂಟರ್‌ಪ್ರೆನರ್ಸ್ ವತಿಯಿಂದ ‘ರಾಷ್ಟ್ರೀಯ ಸಾಧಕ ಪ್ರಶಸ್ತಿ–2025’ ನೀಡಲಾಗುತ್ತಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಶಾಂತಾ ತಿಳಿಸಿದ್ದಾರೆ.

ಚನ್ನಬಸವ ಕೊಟಗಿಯವರು ಪತ್ರಕರ್ತರಾಗಿಯೂ, ಕಲಾವಿದರಾಗಿಯೂ ತಮ್ಮದೇ ಗುರುತು ಮೂಡಿಸಿಕೊಂಡಿದ್ದಾರೆ. ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಮಾರ್ಗದರ್ಶಕರಾಗಿ, ಸಂಘಟಕರಾಗಿ, ಹಲವು ಸಂಘ–ಸಂಸ್ಥೆಗಳ ಪ್ರತಿನಿಧಿಯಾಗಿ ಹಾಗೂ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ.

ವಿವಿಧ ಖಾಸಗಿ ಟಿವಿ ಚಾನೆಲ್‌ಗಳು ಮತ್ತು ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಇವರು, ಪ್ರಸ್ತುತ ಭಾರತ ಸರ್ಕಾರದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಆಗಿಯೂ, ಜೊತೆಗೆ ಭಾರತೀಯ ಜೀವ ವಿಮಾ ನಿಗಮದ ಏಜೆಂಟ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇವರ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ಇತ್ತೀಚೆಗೆ ಹರಿಯಾಣ ರಾಜ್ಯದ ಫರಿದಾಬಾದ್‌ನ ಮ್ಯಾಜಿಕ್ ಅಂಡ್ ಆರ್ಟ್ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತ್ತು.

ಈ ಸಾಧನೆಯನ್ನು ಗುರುತಿಸಿದ ಗ್ಲೋಬಲ್ ಎಂಟರ್‌ಪ್ರೆನರ್ಸ್ ಸಂಸ್ಥೆಯು, ಅಕ್ಟೋಬರ್ 13ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಟೌನ್‌ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ ಎಂದು ಶಾಂತಾ ತಿಳಿಸಿದ್ದಾರೆ.

ಇವರಿಗೆ ಕರ್ನಾಟಕದ ಕಲಾವಿದರು, ಪತ್ರಕರ್ತರು, ಸಾಹಿತಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


Post a Comment

ನವೀನ ಹಳೆಯದು