ರಾಯಚೂರು: “ಸಿಎಂ ಸಿದ್ದರಾಮಯ್ಯ ವೀಕ್ ಆಗಿದ್ದಾರೆ ಅಂತ ಯಾರು ಹೇಳ್ತಾರೆ? ಏನ್ ಕಾರಣ ಅದಕ್ಕೆ? ಸಿಎಂ ಆಡಳಿತ ಚೆನ್ನಾಗಿ ಕೊಡ್ತಿದ್ದಾರೆ. ಜನರಿಗೆ ಕೊಟ್ಟ ಮಾತುಗಳನ್ನು ಈಡೇರಿಸುತ್ತಿದ್ದಾರೆ. ಒಳಮೀಸಲಾತಿ ಸೇರಿದಂತೆ ಪ್ರಣಾಳಿಕೆಯ ಭರವಸೆಗಳನ್ನು ನಿಭಾಯಿಸಿದ್ದಾರೆ. ಹೀಗಾಗಿ ಸಿಎಂ ಯಾವ ಕಾರಣಕ್ಕೂ ನಿಶಕ್ತರಾಗಿಲ್ಲ,” ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಖಾಸಗಿ ಕಾರ್ಯಕ್ರಮದ ಹಿನ್ನೆಲೆ ನಗರಕ್ಕೆ ಆಗಮಿಸಿದ್ದ ಅವರು, ಖಾಸಗಿ ಕಲ್ಯಾಣ ಮಂಟಪದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವುಳ್ಳ ಎರಡು ಅಂಬುಲೆನ್ಸ್‌ಗಳನ್ನು ಉದ್ಘಾಟಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ ಕುರಿತು ವಿಪಕ್ಷ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, “ನಮ್ಮ ಪಕ್ಷದ ವಿಚಾರ ಅವರಿಗೆ ಏನು ಗೊತ್ತಿರತ್ತೆ? ವರಿಷ್ಠರಿಗೆ ಮಾಹಿತಿ ಇರತ್ತೆ, ಅದರ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮ್ಮ ಪಕ್ಷದ ಒಳಗಿನ ವಿಚಾರ ಅವರಿಗೆ ತಿಳಿದಿರುವುದಿಲ್ಲ. ಗೊತ್ತಿಲ್ಲದೇ ಬಿಜೆಪಿ ನಾಯಕರು ಬೇಕಾಬಿಟ್ಟಿ ಹೇಳಿಕೆ ಕೊಡಬಾರದು,” ಎಂದು ವಾಗ್ದಾಳಿ ನಡೆಸಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, “ಪ್ರತಿಯೊಂದು ಪಕ್ಷದಲ್ಲೂ ನಾಯಕರು ಹೈಕಮಾಂಡ್ ಭೇಟಿ ಮಾಡುವುದು ಸಾಮಾನ್ಯ. ತಮ್ಮ ಹಿತಾಸಕ್ತಿ ವಿಚಾರಗಳನ್ನು ಚರ್ಚಿಸುತ್ತಾರೆ. ಇದು ಹೊಸದೇನಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿಯೂ ಇದೇ ರೀತಿ ನಡೆಯುತ್ತಿತ್ತು. ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಿಲ್ಲ,” ಎಂದರು.
ಉಪಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಎನ್ನುವ ಪ್ರಶ್ನೆಗೆ, “ಯಾರು ಆ ರೀತಿಯಾಗಿ ಹೇಳಿದ್ದಾರೆ ಗೊತ್ತಿಲ್ಲ. ಅವರನ್ನೇ ಕೇಳಿ,” ಎಂದು ಉತ್ತರಿಸಿದರು.
ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, “ಈ ಬಗ್ಗೆ ಸಿಎಂ ಈಗಾಗಲೇ ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ಹೀಗಾಗಿ ಹೆಚ್ಚಿನ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ,” ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು, “ಎರಡು-ಅರೆ ವರ್ಷ ಕಳೆದಿದೆ. ಎಲ್ಲಾ ಶಾಸಕರಿಗೂ ಮಂತ್ರಿಯಾಗಬೇಕೆಂಬ ಆಸೆ ಇರುತ್ತದೆ. ಈ ಭಾಗದ ಶಾಸಕ ದದ್ದಲ್ ಸೇರಿದಂತೆ ಎಲ್ಲರೂ ಅರ್ಹರು,” ಎಂದು ಹೇಳಿದರು.
ಕುರುಬ ಸಮುದಾಯದ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಬೇಡಿಕೆ ಬಗ್ಗೆ ಮಾತನಾಡಿದ ಅವರು, “ಎಲ್ಲೆಲ್ಲಿ ಸಮುದಾಯ ಹೆಚ್ಚು ಸಂಖ್ಯೆಯಲ್ಲಿರುತ್ತಾರೋ ಅಲ್ಲಿ ಅವರಿಗೆ ಪ್ರಾತಿನಿಧ್ಯ ಕೊಡಬೇಕು. ಈ ವಿಚಾರವನ್ನು ಸಿಎಂ ಗಮನಕ್ಕೆ ತರುತ್ತೇನೆ,” ಎಂದರು.

ಕಾಮೆಂಟ್ ಪೋಸ್ಟ್ ಮಾಡಿ