ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿಜ್ಞಾನ-ತಂತ್ರಜ್ಞಾನ ಅವಶ್ಯಕ: ಎನ್.ಎಸ್. ಬೋಸರಾಜು
ರಾಯಚೂರು: ಇಂದಿನ ಜಗತ್ತಿನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಪ್ರಗತಿ ಅಪಾರ ವೇಗದಲ್ಲಿ ಸಾಗುತ್ತಿದೆ. ಈ ಬೆಳವಣಿಗೆಗಳನ್ನು ಕೃಷಿ ಕ್ಷೇತ್ರಕ್ಕೆ ತಂದುಕೊಡುವುದರಿಂದ ರೈತರ ಜೀವನದಲ್ಲಿ ಬದಲಾವಣೆಯಾಗಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಸೆಪ್ಟೆಂಬರ್ 19ರಂದು ಕನ್ನಡದಲ್ಲಿ 6ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮವನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಸಂಯುಕ್ತವಾಗಿ ಆಯೋಜಿಸಿತ್ತು.
“ಜನಸಾಮಾನ್ಯರಿಗೆ ವಿಜ್ಞಾನ-ತಂತ್ರಜ್ಞಾನ ವಿಷಯಗಳನ್ನು ಕನ್ನಡದ ಮೂಲಕ ಪರಿಚಯಿಸುವ ಪ್ರಯತ್ನವು ಶ್ಲಾಘನೀಯ. ರೈತರು ತಮ್ಮ ಹೊಲಗಳಲ್ಲಿ ವಿಜ್ಞಾನ ಆಧಾರಿತ ಹೊಸ ಪ್ರಯೋಗಗಳನ್ನು ಅಳವಡಿಸಿಕೊಂಡರೆ ಬೆಳೆ ಉತ್ಪಾದನೆ ಹೆಚ್ಚಾಗುತ್ತದೆ. ತುಂಗಭದ್ರಾ ಜಲಾಶಯದಿಂದ ರಾಯಚೂರು ಜಿಲ್ಲೆಯಲ್ಲಿ ಆರು ಲಕ್ಷ ಎಕರೆ ಭೂಮಿಗೆ ನೀರಾವರಿ ಸಿಗುತ್ತಿರುವ ಈ ಪ್ರದೇಶದಲ್ಲಿ, ತಂತ್ರಜ್ಞಾನ ಬಳಕೆಯು ಇನ್ನಷ್ಟು ಸಹಾಯಕವಾಗಬಹುದು” ಎಂದು ಬೋಸರಾಜು ಅಭಿಪ್ರಾಯಪಟ್ಟರು.
ಸಂಸದ ಜಿ. ಕುಮಾರ ನಾಯಕ ಮಾತನಾಡಿ, ಕೃಷಿ ವಿಜ್ಞಾನವು ದೇಶದ ಭವಿಷ್ಯದ ಆಧಾರವಾಗಿದ್ದು, ರೈತನ ಶ್ರಮಕ್ಕೆ ಗೌರವ ತಂದುಕೊಡುವಲ್ಲಿ ಇಂತಹ ಸಮ್ಮೇಳನಗಳ ಪಾತ್ರ ಮಹತ್ವದ್ದು ಎಂದರು. “ಮೆಣಸಿನಕಾಯಿ ಬೆಳೆಗಾರರಿಗೆ ಈಗಾಗಲೇ ಬೆಂಬಲ ಬೆಲೆ ಸಿಕ್ಕಿದೆ. ರೈತರ ಬದುಕು ಬದಲಿಸಲು ಕೃಷಿ ವಿಜ್ಞಾನಿಗಳ ಹಾಗೂ ವಿದ್ಯಾರ್ಥಿಗಳ ಪಾತ್ರ ಅಗತ್ಯ” ಎಂದರು.
ಸಮ್ಮೇಳನದ ಸಂಯೋಜಕರಾದ ಡಾ. ಎ.ಜಿ. ಶ್ರೀನಿವಾಸ ಪ್ರಾಸ್ತಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷ ಪ್ರೊ. ರಾಜಾಸಾಬ್ ಎ.ಎಚ್., ಸದಸ್ಯರಾದ ಡಿ. ಮಲ್ಲಿಕಾರ್ಜುನ, ತಿಮ್ಮಣ್ಣ ಸೋಮಪ್ಪ ಚಾವಡಿ, ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ಡೀನ್ ಡಾ. ಕೆ. ನಾರಾಯಣರಾವ್, ಮಾಜಿ ಕುಲಪತಿ ಡಾ. ಎಂ.ಕೆ. ನಾಯಕ, ಲೇಖಕಿ ಡಾ. ವಸುಂಧರಾ ಭೂಪತಿ, ಪ್ರಾಧ್ಯಾಪಕರಾದ ಮಲ್ಲಿಕಾರ್ಜುನ ಅಯ್ಯನಗೌಡರ, ಡಾ. ಶರಣಗೌಡ, ಆನಂದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕಾಮೆಂಟ್ ಪೋಸ್ಟ್ ಮಾಡಿ