ರಾಯಚೂರು: ಜಮೀನು ಖರೀದಿ ವಿಷಯದಲ್ಲಿ ಉಂಟಾದ ವಿವಾದದಿಂದ ಕಾಂಗ್ರೆಸ್ ಮುಖಂಡ ಗುಡ್ಸಿ ತಿಮ್ಮಾರೆಡ್ಡಿ, ವಾರ್ಡ್ 22ರ ನಗರಪಾಲಿಕೆ ಸದಸ್ಯ ಜಿಂದಪ್ಪ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ಪಾಲಿಕೆ ವಲಯ ಕಚೇರಿಯಲ್ಲಿ ನಡೆದಿದೆ.
ಕಚೇರಿ ಅವಧಿಯಲ್ಲಿ ಜಿಂದಪ್ಪ ಅವರು ಮಹಾಪೌರರ ಕಚೇರಿಯಲ್ಲಿ ಕುಳಿತಿರುವಾಗ ತಿಮ್ಮಾರೆಡ್ಡಿ ಹಾಗೂ ಅವರ ಬೆಂಬಲಿಗರು ಆಗಮಿಸಿ ಮಾತುಕತೆ ನಡೆಸಿ, ಆಕ್ರೋಶಗೊಂಡು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಮಹಾಪೌರ ನರಸಮ್ಮ ನರಸಿಂಹಲು ಮಾಡಿಗಿರಿ ಹಾಗೂ ಮಹಿಳಾ ಸದಸ್ಯೆಯೊಬ್ಬರು ಉಪಸ್ಥಿತರಿದ್ದರು. ಹಲ್ಲೆಯ ವೇಳೆ ಮಹಾಪೌರರ ಕಚೇರಿಯ ಪೀಠೋಪಕರಣಗಳನ್ನು ಸಹ ಧ್ವಂಸಗೊಳಿಸಲಾಗಿದೆ.
ಜಿಂದಪ್ಪ ಅವರಿಗೆ ಕುತ್ತಿಗೆ ಭಾಗದಲ್ಲಿ ಗಾಯಗಳಾಗಿದ್ದು, ಫೋನ್ ಮತ್ತು ಕನ್ನಡಕವನ್ನು ಒಡೆದು ಹಾಕಲಾಗಿದೆ ಎಂದು ಹೇಳಲಾಗಿದೆ. ಏಕಾಏಕಿ ನಡೆದ ಹಲ್ಲೆಯಿಂದ ಕಚೇರಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ನಂತರ ಪಾಲಿಕೆ ಅಧ್ಯಕ್ಷೆ ಹಾಗೂ ಇತರೆ ಸದಸ್ಯರು ಸ್ಥಳಕ್ಕೆ ಬಂದು ಮಾಹಿತಿ ಪಡೆದು ಸಮಾಧಾನಪಡಿಸಿದರು.
ಸದರ್ ಬಜಾರ್ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ವಾರ್ಡ್ 7ರ ಸದಸ್ಯೆ ಅನಿತಾ ಅವರ ಪತಿಯಾಗಿರುವ ಗುಡ್ಸಿ ತಿಮ್ಮಾರೆಡ್ಡಿ ವಿರುದ್ಧ ದೂರು ದಾಖಲಿಸಲು ಸದಸ್ಯ ಜಿಂದಪ್ಪ ಹಾಗೂ ಕಚೇರಿ ಸಿಬ್ಬಂದಿಗಳು ಮುಂದಾಗಿದ್ದಾರೆ.
ಈ ವೇಳೆ ಯುವ ಕಾಂಗ್ರೆಸ್ ಮುಖಂಡ ರವಿಬೋಸರಾಜ ಸ್ಥಳಕ್ಕೆ ಬಂದು ಭೇಟಿ ನೀಡಿ, ಬಳಿಕ ಕಾಂಗ್ರೆಸ್ ಪಕ್ಷದ ಕಚೇರಿಗೆ ತೆರಳಿದರು. ಉಪಮಹಾಪೌರ ಸಾಜಿದ್ ಸಮೀರ್, ಸದಸ್ಯರಾದ ಜಯಣ್ಣ, ಬಿ.ರಮೇಶ್, ಮಹಾಪೌರ ನರಸಮ್ಮ ನರಸಿಂಹಲು ಮಾಡಿಗಿರಿ ಹಾಗೂ ಅನೇಕ ಮಹಿಳಾ ಸದಸ್ಯರು ಹಾಜರಿದ್ದರು.
ಜಮೀನು ಖರೀದಿಗೆ ಸಂಬಂಧಿಸಿದ ವಿವಾದವೇ ಈ ಘಟನೆಗೆ ಕಾರಣವಾಗಿದ್ದು, ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಹ ಮಾಹಿತಿ ನೀಡಲಾಗಿದೆ. ಆದರೆ ಹಲ್ಲೆಗೆ ಸಂಬಂಧಿಸಿದಂತೆ ದೂರು ಇನ್ನೂ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

ಕಾಮೆಂಟ್ ಪೋಸ್ಟ್ ಮಾಡಿ