Top News

ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ ಸೆ.21 ರಂದು ರಾಯಚೂರಿನಲ್ಲಿ

 


ರಾಯಚೂರು: ಬೆಳಕು ಸಾಹಿತ್ಯಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಲಾಗುತ್ತಿರುವ 120ನೇ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ ಸೆಪ್ಟೆಂಬರ್ 21ರಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಸಂಸ್ಥಾಪಕ ಅಣ್ಣಪ್ಪ ಮೇಟಿಗೌಡ ತಿಳಿಸಿದ್ದಾರೆ.


ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ — ಸಮ್ಮೇಳನದ ಅಂಗವಾಗಿ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ, ಕವಿಗೋಷ್ಠಿ, ಸಾಧಕರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ, 210 ಕವಿಗಳ ಕವನಗಳನ್ನು ಒಳಗೊಂಡ “ಬೆಳಕಿನ ಬುತ್ತಿ” ಕವನ ಸಂಕಲನ ಲೋಕಾರ್ಪಣೆ ಹಾಗೂ ‘ರೇಂಜ್’ ಚಿತ್ರ ಪೋಸ್ಟರ್ ಅನಾವರಣ ನಡೆಯಲಿದೆ ಎಂದು ಹೇಳಿದರು.


ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಚಿಕ್ಕಣ್ಣ ಡಿ.ಪಿ (ದಾ ಪು ಚಿ), ಉದ್ಘಾಟಕರಾಗಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಲೇಖಕ ಡಾ. ಸಿ. ಸೋಮಶೇಖರ್ ಆಗಮಿಸಲಿದ್ದಾರೆ. ಜಿಲ್ಲಾಧಿಕಾರಿ ನಿತೀಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಕರ್ನಾಟಕ ವಿಚಾರ ವೇದಿಕೆಯ ಅಧ್ಯಕ್ಷ ಪಾಲನೇತ್ರ ಉಪಸ್ಥಿತರಿರುವರು. ಸಚಿವ ಎನ್.ಎಸ್. ಬೋಸರಾಜು, ಶಾಸಕರು ಡಾ. ಶಿವರಾಜ ಪಾಟೀಲ್, ಬಸನಗೌಡ ದದ್ದಲ್ ಹಾಗೂ ವಿಧಾನಪರಿಷತ್ ಸದಸ್ಯ ಎ. ವಸಂತ ಕುಮಾರ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.


ಮಧ್ಯಾಹ್ನ 2 ಗಂಟೆಗೆ ನಡೆಯುವ ಉಪನ್ಯಾಸ ಗೋಷ್ಠಿಗೆ ಸಾಹಿತ್ಯಕಿ ಲತಾ ಕೆ.ಎಸ್. ಹೆಗಡೆ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಪ್ರಾಧ್ಯಾಪಕಿ ಡಾ. ಎಂ. ಸೆಲ್ವಿ ಬಾಲಕೃಷ್ಣ “ಕನ್ನಡ ಮತ್ತು ಯುವ ಜನತೆ” ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ನಡೆಯುವ ಕವಿಗೋಷ್ಠಿಯನ್ನು ಸಾಹಿತಿ ಬೀರಪ್ಪ ಶಂಭೋಜಿ ಉದ್ಘಾಟಿಸಲಿದ್ದು, ಅಯ್ಯಪ್ಪಯ್ಯ ಹುಡಾ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಡಾ. ಬಸಮ್ಮ ಹಿರೇಮಠ ಅವರ “ಮನ ಪರಿವರ್ತನೆ”, ಜ್ಯೋತಿ ಮಾಳಿ ಅವರ “ಹಾಳು ಗೋಡೆಯಲೊಂದು ಚಿಗುರು” ಕೃತಿಗಳ ಬಿಡುಗಡೆ ನಡೆಯಲಿದೆ.


ಸಂಜೆ 5 ಗಂಟೆಗೆ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದಲೂ ಹೊರರಾಜ್ಯ ಹಾಗೂ ಅನಿವಾಸಿ ಭಾರತೀಯ ಕಲಾವಿದರು ನೃತ್ಯ-ಸಂಗೀತದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಸಾಧಕರಿಗೆ ದ.ರಾ. ಬೇಂದ್ರೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.


“ಸಾಹಿತಿಗಳು, ಸಾಧಕರು, ಕಲಾವಿದರು ಹಾಗೂ ಬೆಳಕು ಟ್ರಸ್ಟ್‌ನ ಎಲ್ಲಾ ಜಿಲ್ಲಾಧಿಕಾರಿಗಳು ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು” ಅಣ್ಣಪ್ಪ ಮೇಟಿಗೌಡ ಕೋರಿದರು.


ಈ ಪತ್ರಿಕಾಗೋಷ್ಠಿಯಲ್ಲಿ ಮಾರುತಿ ಬಡಿಗೇರ್, ಅಂಬರೀಶ್ ಪಾಟೀಲ್, ಬಸವರಾಜ್ ಉಪಸ್ಥಿತರಿದ್ದರು.

Post a Comment

ನವೀನ ಹಳೆಯದು