Top News

ಜಾತಿಗಣತಿ ಗೊಂದಲ: ಸಂಪುಟದಲ್ಲಿ ಸಚಿವರ ಜಟಾಪಟಿ, ಸಿಎಂ ಸಿದ್ದರಾಮಯ್ಯ ಬೇಸರ



ವಿವಾದದ ನಡುವೆ ಕ್ರಿಶ್ಚಿಯನ್‌ ಜಾತಿ ಕಲಂ ತೆಗೆಯಲು ಸಿಎಂ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಜಾತಿ ಗಣತಿ ಕುರಿತಂತೆ ಆಡಳಿತಾರೂಢ ಕಾಂಗ್ರೆಸ್ ಸಂಪುಟ ಸಭೆಯೇ ಬಿಸಿ ಬಿಸಿ ಚರ್ಚೆಗೆ ವೇದಿಕೆಯಾಗಿದೆ. ಹೊಸ ಜಾತಿ ಸೇರ್ಪಡೆ ಮತ್ತು “ಕ್ರಿಶ್ಚಿಯನ್‌ ಬ್ರಾಹ್ಮಣ, ಕ್ರಿಶ್ಚಿಯನ್‌ ಒಕ್ಕಲಿಗ, ಕ್ರಿಶ್ಚಿಯನ್‌ ಲಿಂಗಾಯತ” ಮುಂತಾದ ಧರ್ಮ-ಜಾತಿ ಜೋಡಣೆಗಳಿಂದ ಉಂಟಾದ ಗೊಂದಲಕ್ಕೆ ಹಲವಾರು ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಕೆಲ ಸಚಿವರು, “ಈ ರೀತಿಯ ಗೊಂದಲ ನಿವಾರಣೆ ಮಾಡದೇ ಸಮೀಕ್ಷೆ ನಡೆಸಿದರೆ ಭಾರಿ ಸಮಸ್ಯೆ ಎದುರಾಗಬಹುದು” ಎಂದು ಎಚ್ಚರಿಕೆ ನೀಡಿದ್ದು, ಸದ್ಯಕ್ಕೆ ಸಮೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ಸಿಎಂ ಸಿದ್ದರಾಮಯ್ಯ, ಸಂತೋಷ್ ಲಾಡ್, ಮುನಿಯಪ್ಪ ಮತ್ತು ಭೈರತಿ ಸುರೇಶ್ ಮಾತ್ರ ಸಮೀಕ್ಷೆಯನ್ನು ಹಾಲಿ ರೂಪದಲ್ಲೇ ಮುಂದುವರಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಚಿವರ ಆಕ್ರೋಶಕ್ಕೆ ಬೇಸರಗೊಂಡ ಸಿಎಂ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಆಯೋಗಕ್ಕೆ ವಿವಾದಿತ “ಕ್ರಿಶ್ಚಿಯನ್‌ ಜಾತಿ” ಕಲಂಗಳನ್ನು ಕೈಬಿಡುವಂತೆ ಸೂಚಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 10 ಗಂಟೆಗೆ ಮತ್ತೆ ಸಂಪುಟ ಸಭೆ ನಡೆಯಲಿದೆ. ಸಮೀಕ್ಷೆಯನ್ನು ಮುಂದೂಡಲಾಗುತ್ತದೆಯೇ? ಇಲ್ಲವೇ ತಿದ್ದುಪಡಿಗಳೊಂದಿಗೆ ಜಾತಿಗಣತಿ ಆರಂಭವಾಗುತ್ತದೆಯೇ ಎಂಬುದರ ಬಗ್ಗೆ ಅಂತಿಮ ನಿರ್ಧಾರ ಇಂದು ಹೊರಬೀಳಲಿದೆ.
ಕೇವಲ ಮೂರು ದಿನಗಳಲ್ಲಿ ರಾಜ್ಯದಾದ್ಯಂತ ಜಾತಿಗಣತಿ ಪ್ರಾರಂಭವಾಗಬೇಕಿತ್ತು. ಆದರೆ, ಸಮೀಕ್ಷೆಯ ಕೈಪಿಡಿಯಲ್ಲಿ “ಕ್ರಿಶ್ಚಿಯನ್‌ ಬ್ರಾಹ್ಮಣ, ಕ್ರಿಶ್ಚಿಯನ್‌ ಒಕ್ಕಲಿಗ, ಕ್ರಿಶ್ಚಿಯನ್‌ ಕುರುಬ” ಮುಂತಾದ ವಿವಾದಾತ್ಮಕ ನಮೂದುಗಳು ಸೇರಿರುವುದು ದೊಡ್ಡ ಗೊಂದಲಕ್ಕೆ ಕಾರಣವಾಗಿದೆ.
2 ಲಕ್ಷಕ್ಕೂ ಹೆಚ್ಚು ಹಳೆಯ ಕೈಪಿಡಿಗಳನ್ನು ತಿರಸ್ಕರಿಸಿ, ಹೊಸದನ್ನು ಮುದ್ರಿಸಲು ಹಿಂದುಳಿದ ವರ್ಗಗಳ ಆಯೋಗ ಮುಂದಾಗಿದೆ. ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಮುದ್ರಿಸಿದ ಕೈಪಿಡಿ ಈಗ ತಿಪ್ಪೆ ಸೇರಿದೆ. ಇದರಿಂದಲೇ ಸರ್ಕಾರದ ನಿರ್ವಹಣಾ ಸಾಮರ್ಥ್ಯದ ಮೇಲೆಯೂ ಪ್ರಶ್ನೆ ಎದ್ದಿದೆ.
ಸಂಪುಟ ಸಭೆಯಲ್ಲಿ ಸಚಿವರೇ ಸಿಎಂ ಸಿದ್ದರಾಮಯ್ಯ ಎದುರು ಗಟ್ಟಿಯಾಗಿ ವಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ, ಸಿಎಂ ಕುರ್ಚಿಯಿಂದ ಎದ್ದು ನಿಂತು ಅಸಮಾಧಾನ ತೋರಿದ್ದಾರೆ. “ನನ್ನನ್ನು ಜಾತಿವಾದಿ ಎಂದು ಬಿಂಬಿಸಲಾಗುತ್ತಿದೆ” ಎಂದು ಬೇಸರಗೊಂಡ ಸಿಎಂ, ಕೊನೆಗೆ ಆಯೋಗಕ್ಕೆ ವಿವಾದಿತ ಕಲಂ ತೆಗೆದು ಹಾಕುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಇನ್ನೊಂದೆಡೆ, ಬಿಜೆಪಿ ನಾಯಕರು “ಸಿದ್ದರಾಮಯ್ಯ ಸಂಪುಟದಲ್ಲೇ ತಾಳಮೇಳ ಇಲ್ಲ” ಎಂದು ವ್ಯಂಗ್ಯವಾಡಿದ್ದಾರೆ. ಹೀಗಾಗಿ, ಜಾತಿಗಣತಿ ನಿಗದಿಯಂತೆ ಆರಂಭವಾಗುತ್ತದೆಯೇ? ಅಥವಾ ಮತ್ತೊಮ್ಮೆ ಮುಂದೂಡಲಾಗುತ್ತದೆಯೇ? ಎಂಬುದು ಸದ್ಯದ ದೊಡ್ಡ ಕುತೂಹಲವಾಗಿದೆ.

Post a Comment

ನವೀನ ಹಳೆಯದು