ರಾಯಚೂರು: ನಗರದ ಶ್ರೀ ಅಂಬಾಭವಾನಿ ದೇವಸ್ಥಾನ ಖಾಸಭಾವಿ ಹಿಂಭಾಗದಲ್ಲಿ ಹಾದುಹೋಗುವ ಕೂಡುರಸ್ತೆಯ ವೃತ್ತದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಠಾಪನೆ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.
ಈ ಮನವಿಯನ್ನು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಹಾಗೂ ವೃತ್ತಾಭಿವೃದ್ಧಿ ಸಮಿತಿ, ರಾಯಚೂರು ಜಿಲ್ಲಾ ಕ್ಷತ್ರೀಯ ಒಕ್ಕೂಟ ಹಾಗೂ ಕರ್ನಾಟಕ ಕ್ಷತ್ರೀಯ ಮರಾಠ ಸಂಘ ಜಂಟಿಯಾಗಿ ಸಲ್ಲಿಸಿವೆ.
2016ರ ಮೇ 31ರಂದು ನಡೆದ ರಾಯಚೂರು ನಗರಸಭೆಯ ಸಾಮಾನ್ಯ ಮಹಾಸಭೆಯಲ್ಲಿ ನಿರ್ಣಯ ಸಂಖ್ಯೆ 52ರ ಪ್ರಕಾರ ಪುತ್ಥಳಿ ಪ್ರತಿಷ್ಠಾಪನೆಗೆ ಸರ್ವಾನುಮತದಿಂದ ಅನುಮೋದನೆ ನೀಡಿದ್ದರೂ ಇಷ್ಟು ವರ್ಷಗಳಾದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ ಹಿಂದೂ ಸಾಮ್ರಾಜ್ಯದ ಸಂಸ್ಥಾಪಕರಾದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಕೂಡುರಸ್ತೆಯ ವೃತ್ತದಲ್ಲಿ ಪ್ರತಿಷ್ಠಾಪಿಸುವ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಅಂಬಾಜಿ ಮೈದರ್‌ಕರ್, ಅಶೋಕಕುಮಾರ ಮೈದರ್‌ಕರ್, ಜಯಂತರಾವ್ ಪತಂಗೆ, ಶ್ರೀನಿವಾಸ ಪತಂಗೆ, ಬಿ.ವೆಂಕಟಸಿಂಗ್, ಹನುಮಂತ್ರಾವ್ ಜಗತಪ್, ಸತೀಶ ಜಗತಪ್, ಭೀಮಣ್ಣ ಜಾದವ್, ಜಗದೀಶ, ರಘು, ಅಮರೇಶ, ಡಿ.ಈರಣ್ಣ, ರಾಜೇಂದ್ರ ಶಿವಾಳೆ ಸೇರಿದಂತೆ ಅನೇಕರಿದ್ದರು.


ಕಾಮೆಂಟ್ ಪೋಸ್ಟ್ ಮಾಡಿ