ಈಶ್ವರ ದೇವಸ್ಥಾನ ಅಭಿವೃದ್ಧಿಗೆ ಅನುದಾನ – ಶಾಸಕ ಡಾ.ಶಿವರಾಜ ಪಾಟೀಲ್

ರಾಯಚೂರು: ಈಶ್ವರ ದೇವಸ್ಥಾನ ಸಮಿತಿಯಿಂದ ದಸರಾ ಹಬ್ಬದ ಅಂಗವಾಗಿ ಅನೇಕ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ದೇವಸ್ಥಾನ ಹಾಗೂ ಬಡಾವಣೆಯ ಅಭಿವೃದ್ಧಿಗೆ ಸದಾ ಶ್ರಮಿಸಲಾಗುವುದು ಎಂದು ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.

ನಗರದ ಡ್ಯಾಡಿ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಇಂದು ನಡೆದ 1008 ಮುತ್ತಯದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಶ್ವರ ದೇವಸ್ಥಾನದಲ್ಲಿ ಮಂಗಳೂರು ಟೈಲ್ಸ್ ಹಾಕಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಹತ್ತು ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಡ್ಯಾಡಿ ಕಾಲೋನಿ ಅಭಿವೃದ್ಧಿಗೆ ಈಗಾಗಲೇ ಸಚಿವರಿಂದ 1 ಕೋಟಿ ರೂ. ಅನುದಾನ ಲಭ್ಯವಾಗಿದ್ದು, ಇನ್ನೂ 1 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲಾಗುವುದು. ಜೊತೆಗೆ ಒಳರಸ್ತೆಗಳ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಒಟ್ಟಾರೆಯಾಗಿ ಈ ಭಾಗಕ್ಕೆ 1 ಕೋಟಿ 60 ಲಕ್ಷ ರೂ. ಅನುದಾನ ದೊರೆಯಲಿದೆ ಎಂದು ತಿಳಿಸಿದರು.

ಅಖಿಲ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪೂರ ಮಾತನಾಡಿ, ನಗರದಲ್ಲಿ ನಡೆದ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಿದ್ದ 45 ಸಾವಿರ ಅಭ್ಯರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ಈಶ್ವರ ದೇವಸ್ಥಾನ ಸಮಿತಿಯೇ ನಿರ್ವಹಿಸಿತ್ತು. ಇಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಿತಿ ಹಮ್ಮಿಕೊಂಡಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಹಿರೆಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಶರಣುಭೂಪಾಲ ನಾಡಗೌಡ, ಪಾಲಿಕೆ ಸದಸ್ಯ ದರೂರ ಬಸವರಾಜ, ಆಂಜನೇಯ್ಯ ಕಡಗೋಲ, ಬಸವರಾಜ ಸಕ್ರಿ, ಉದಯಕುಮಾರ ಯಾಪಲದಿನ್ನಿ, ವೀರೇಶಪ್ಪ ಸೇರಿದಂತೆ ಬಡಾವಣೆಯ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.

Post a Comment

ನವೀನ ಹಳೆಯದು