ರಾಯಚೂರು: ಪ್ರತಿ ಬಾರಿಯಂತೆ ಈ ಬಾರಿಯೂ ಗಣೇಶೋತ್ಸವವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಣೆ ಮಾಡಲು ಎಲ್ಲಾ ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಇದಕ್ಕೆ ಸಾರ್ವಜನಿಕರು, ಗಣೇಶೋತ್ಸವ ಸಮಿತಿಗಳು ಮತ್ತು ಎಲ್ಲಾ ಧರ್ಮಗಳ ಮುಖಂಡರ ಸಹಕಾರ ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ನಿತೀಶ ಹೇಳಿದರು.
ಅವರಿಂದು ನಗರದ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಗಣೇಶೋತ್ಸವದ ಆಚರಣೆ ಕುರಿತು ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆ.27 ರಿಂದ ಗಣೇಶೋತ್ಸವ ಪ್ರಾರಂಭವಾಗಲಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಸಂಬಂದಿಸಿದಂತೆ ಎಲ್ಲಾ ಸಿದ್ಧತೆಗಳನ್ನು ಮತ್ತು ವ್ಯವಸ್ಥಿತವಾಗಿರುವಂತೆ ನೋಡಿಕೊಳ್ಳಲು, ಪರವಾನಿಗೆಗೆ ಸಂಬಂಧಿಸಿದಂತೆ ನಗರದ ಸದರ್ಬಜಾರ್ ಪೊಲೀಸ್ ಠಾಣೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದ್ದು, ಆ.18ರಿಂದ ಈ ವ್ಯವಸ್ಥೆ ಆರಂಬವಾಗಲಿದೆ. ಗಣೇಶ ಪ್ರತಿಷ್ಠಾಪನಾ ಮಂಡಳಿಗಳು ಜಿಲ್ಲಾಡಳಿತದ ಇಲಾಖೆಗಳೊಂದಿಗೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಅಗ್ನಿಶಾಮಕ ಇಲಾಖೆ, ಜೆಸ್ಕಾಂ ಇಲಾಖೆ, ವೇದಿಕೆಗೆ ಸಂಬಂದಿಸಿದಂತೆ ಲೋಕೋಪಯೋಗಿ ಇಲಾಖೆಯಿಂದ ಕ್ಲಿಯರೆನ್ಸ್ ಪಡೆದುಕೊಳ್ಳಬೇಕು. ಪ್ರತಿ ವರ್ಷದಂತೆ ಈ ಬಾರಿಯೂ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಲೇಬೇಕು ಎಂದರು.
ಸ್ವಚ್ಛತೆಗೆ ಸಂಬಂಧಿಸಿದಂತೆ ನಗರದ ಖಾಸಬಾವಿಯನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ನಡೆದಿದ್ದು, ಜೊತೆಗೆ ಗಣೇಶೋತ್ಸವ ಮುಗಿಯುವವರೆಗೂ ಸ್ವಚ್ಛತಾ ಸಿಬ್ಬಂದಿಗಳು ನಿರಂತರವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ರಾತ್ರಿ 10.30ರೊಳಗಾಗಿ ವಿಸರ್ಜನೆಯನ್ನು ಮಾಡುವಂತೆ ಸಮಯ ನಿಗಧಿಗೊಳಿಸಲಾಗಿದೆ. ಅದರಂತೆ ನಿಯಮಾನುಸಾರ ವಿಸರ್ಜನೆ ಮಾಡಬೇಕು. ಜೊತೆಗೆ ಬೃಹತ್ ಧ್ವನಿವರ್ದಕಗಳ ಮೂಲಕ ಶಬ್ದ ಮಾಲಿಕನ್ಯ ಮಾಡುವುದನ್ನು ನಿಷೇಧಿಸಲಾಗಿದ್ದು, ಕನಿಷ್ಟ ಶಬ್ಧವನ್ನು ಬಳಸಬೇಕು. ಇಲ್ಲವಾದಲ್ಲಿ ಶಬ್ದಮಾಲಿನ್ಯ ಕಾಯ್ಷದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಮಾತನಾಡಿ, ನಿಯಮಗಳನ್ನು ಪಾಲಿಸುವ ಮೂಲಕ ಗಣೇಶೋತ್ಸವವನ್ನು ಆಚರಿಸವುದು ಅತಿಮುಖ್ಯ, ಜೊತೆಗೆ ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿರ್ಕೆ ಹಾನಿಯಾಗದಂತೆ ಗಣೇಶೋತ್ಸವ ಆಚರಣೆ ಮಾಡಬೇಕು. ಪಿಓಪಿ ಗಣೇಶಗಳನ್ನು ಬಳಸಬಾರದು. ಪ್ರತಿಯೊಂದು ಜಿಲ್ಲೆಯಲ್ಲಿ ನಿಷೇಧಿಸಲಾಗಿದೆ. ಅದರಂತೆ ರಾಯಚೂರಿನಲ್ಲಿಯೂ ಪಿಓಪಿ ಗಣೇಶ ಮೂರ್ತಿಗಳನ್ನು ಬಳಸಬಾರದು. ಇದರೊಂದಿಗೆ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಏಕಬಳಕೆ ಪ್ಲಾಸ್ಟಿಕ್ ಬಳಸಬಾರದು ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹರೀಶ ಮಾತನಾಡಿ, ಗಣೇಶೋತ್ಸವಕ್ಕೆ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆಯನ್ನು ಒದಗಿಸಲಾಗುವುದು. ಗಣೇಶೋತ್ಸವದ 9ನೇ ದಿನದ ಗಣೇಶ ಮೂರ್ತಿ ವಿಸರ್ಜನೆ ಸೆ.4ರಂದು ಬರಲಿದ್ದು, ಮರುದಿನ ಅಂದರೆ ಸೆ.5ಕ್ಕೆ ಈದ್ ಮಿಲಾದ್ ಇರುವುದರಿಂದ ಪೊಲೀಸ್ ಬಂದೋಬಸ್ತ್ಗೆ ಒತ್ತಡ ಬೀಳಲಿದ್ದು, ಒಂಬತ್ತನೇ ದಿನದ ಗಣೇಶ ವಿಸರ್ಜನೆಯನ್ನು ತಡರಾತ್ರಿ ಮಾಡದೇ ಆದಷ್ಟು ಬೇಗ ವಿಸರ್ಜನೆ ಮುಗಿಸಬೇಕು ಎಂದರು.
ಇದೇ ವೇಳೆ ಶ್ರೀನಿವಾಸ ಪತಂಗೆ ಮಾತನಾಡಿ, ಹಬ್ಬದ ಆಚರಣೆ ಸುಗಮವಾಗಿ ನಡೆಯಲಿದ್ದು, ಎಲ್ಲಾ ಗಣೇಶ ಪ್ರತಿಷ್ಠಾಪನಾ ಸಮಿತಿಗಳು ಇಲಾಖೆಗಳೊಂದಿಗೆ ಸಹಕರಿಸಲಿವೆ. ಆದರೆ ನಗರದ ಕಲ್ಲಾನೆಯ ಸುತ್ತಮುತ್ತಲೂ ಮಹಾನಗರ ಪಾಲಿಕೆಯಿಂದ ಸ್ವಚ್ಛತೆಯೇ ಮಾಡುವುದಿಲ್ಲ. ಈ ಬಗ್ಗೆ ಪಾಲಿಕೆ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ರವೀಂದ್ರ ಜಲ್ದಾರ್ ಮಾತನಾಡಿ, ಗಣೇಶೋತ್ಸವಕ್ಕೆ ಒಂದೂವರೆ ತಿಂಗಳಿಂದ ನಿಯಮಗಳನ್ನು ತಿಳಿಸಲಾಗಿದೆ. ಕೆಲವು ಕಡೆಗಳಲ್ಲಿ ಮಹಾನಗರ ಪಾಲಿಕೆಯಿಂದ ಗಣೇಶ ಮೂರ್ತಿಗಳನ್ನು ಸೀಜ್ ಮಾಡಲಾಗಿದೆ. ಏಕಾಏಕಿ ಪಿಓಪಿ ಗಣೇಶ ಮೂರ್ತಿಗಳನ್ನು ಸೀಜ್ ಮಾಡಲಾಗಿದ್ದು, ಈ ಕ್ರಮವನ್ನು ಆರು ತಿಂಗಳ ಮುಂಚೆಯೇ ಕೈಗೊಳ್ಳಬೇಕಿತ್ತು ಎಂದರು.
ಡಾ.ಆನಂದ ಫಡ್ನಿಸ್ ಮಾತನಾಡಿ, ಸೆ.4ರಂದು ಹೆಚ್ಚಿನ ಗಣೇಶ ಮೂರ್ತಿಗಳು ವಿಸರ್ಜನೆಯಾಗುತ್ತವೆ. ಅದಕ್ಕೆ ಸಂಬಂಧಪಟ್ಟ ಇಲಾಖೆಗಳು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಶಾಂತಿಯಿಂದ ನಡೆಯಲು ಎಲ್ಲರೂ ಸಹಕರಿಸಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎರಡನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಸ್ವಾಮಿ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಮಾಜದ ಮುಖಂಡರು, ಗಜಾನನ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್ ಪೋಸ್ಟ್ ಮಾಡಿ