Top News

ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಯೇ ಸರ್ಕಾರದ ಪ್ರಥಮ ಆಧ್ಯತೆ: ಎನ್‌ಎಸ್ ಬೋಸರಾಜು

 

ಸಚಿವ, ಶಾಸಕರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ

ರಾಯಚೂರು: ಜಿಲ್ಲೆಯ ಸಿರವಾರ ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮತ್ತು ಭೂಮಿಪೂಜೆ ಕಾರ್ಯಕ್ರಮವನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ್ ನೇತೃತ್ವದಲ್ಲಿ ನಡೆಸಲಾಯಿತು.

ಸಿರವಾರ ಪಟ್ಟಣದಲ್ಲಿ ನಡೆಯುತ್ತಿರುವ ತಾಲೂಕು ಕ್ರೀಡಾಂಗಣ ಕಾಮಗಾರಿಯನ್ನು ಸಚಿವರು ಹಾಗೂ ಶಾಸಕ ವೀಕ್ಷಿಸಿದರು. ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ತ್ವರಿತಗತಿಯಲ್ಲಿ ಗುಣಮಟ್ಟದೊಂದಿಗೆ ಕ್ರೀಡಾಂಗಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದರು. ಇದೇ ವೇಳೆ ಪ್ರಜಾಸೌಧ ಹಾಗೂ ಅಗ್ನಿಶಾಮಕ ಠಾಣೆ ಕಾಮಗಾರಿಗಳ ಸ್ಥಳಗಳನ್ನೂ ವೀಕ್ಷಿಸಿ, ಸಾರ್ವಜನಿಕ ಸೌಲಭ್ಯ ಒದಗಿಸಲು ಅವುಗಳನ್ನು ಬೇಗನೆ ಮುಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಮಾನ್ವಿ ಕ್ಷೇತ್ರದ ಸಿರವಾರ ಪಟ್ಟಣದ ವಾರ್ಡ್ ನಂ. 4 ರಲ್ಲಿ ಕೆಕೆಆರ್ಡಿಬಿ ಮೈಕ್ರೋ ಯೋಜನೆ ಅಡಿಯಲ್ಲಿ 50 ಲಕ್ಷ ರೂ. ವೆಚ್ಚದ ಸಮುದಾಯ ಭವನ ಕಾಮಗಾರಿಗೆ ಹಾಗೂ ಸಿರವಾರ ತಾಲೂಕಿನ ಮೂರ್ಖಗುಡ್ಡ ಗ್ರಾಮದಲ್ಲಿ ಕೆಕೆಆರ್ಡಿಬಿ ಮ್ಯಾಕ್ರೋ ಯೋಜನೆ ಅಡಿಯಲ್ಲಿ 35 ಲಕ್ಷ ರೂ. ವೆಚ್ಚದ ಸಮುದಾಯ ಭವನ ಕಾಮಗಾರಿಗೆ ಅವರು ಭೂಮಿ ಪೂಜೆ ನೆರವೇರಿಸಿದರು. ಜೊತೆಗೆ ಅಪೆಂಡಿಕ್ಸ್ ಯೋಜನೆ ಅಡಿಯಲ್ಲಿ ಯು ಗುಡದಿನ್ನಿಯ ರಾಜ್ಯ ಹೆದ್ದಾರಿ 34 ರಿಂದ 38 ಕಿಮೀ ವರೆಗಿನ 3 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೂ ಶಿಲಾನ್ಯಾಸ ನೆರವೇರಿಸಲಾಯಿತು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳೊಂದಿಗೆ ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಮಾನ್ವಿ ಕ್ಷೇತ್ರದ ಶೈಕ್ಷಣಿಕ, ಆರೋಗ್ಯ ಮತ್ತು ಮೂಲಸೌಕರ್ಯ ವಲಯದ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿAದ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಅಶೋಕ ಪವಾರ್, ಮುಖಂಡರು ಶರಣಯ್ಯ ನಾಯಕ್, ಬ್ರಿಜ್ಜೆಶ ಪಾಟೀಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಿರ್ಮಲಾ ಬೆಣ್ಣಿ, ಶಿವಕುಮಾರ ಚುಕ್ಕಿ, ದಾನಗೌಡ, ಅರಕೇರಾ ಶಿವಕುಮಾರ್, ರುದ್ರಪ್ಪ ಅಂಗಡಿ, ಹಸನ್ ಅಲೀ, ಹೆಚ್.ಕೆ. ಅಮರೇಶ, ನಾಗಪ್ಪ, ದುರುಗಣ್ಣ ನಾಯಕ್, ಬಸವರಾಜ ಕಲ್ಲೂರು, ವಾಸು ಬಾಬು, ಸುಬ್ಬರಾವ್, ರಡ್ಡೆಪ್ಪ ತಾಂಡ, ಅಮರೇಶ ತಾಯಣ್ಣ ನಾಯಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Post a Comment

ನವೀನ ಹಳೆಯದು