Top News

ತುಂಗಭದ್ರಾ ಗೇಟು ನಿರ್ಲಕ್ಷ್ಯ: ರೈತರ ಬದುಕು ಬೀದಿಗೆ ತರಬೇಡಿ- ವೀರನಗೌಡ ಪಾಟೀಲ್ ಲೆಕ್ಕಿಹಾಳ

 


ರಾಯಚೂರು: ತುಂಗಭದ್ರಾ ಜಲಾಶಯದ ಗೇಟುಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವಾಲಯದ ತಜ್ಞ ಸಮಿತಿ ಮುಂಚಿತವಾಗಿ ಎಚ್ಚರಿಕೆ ನೀಡಿದ್ದರೂ ರಾಜ್ಯ ಸರಕಾರ ಅದನ್ನು ನಿರ್ಲಕ್ಷಿಸಿದೆ. ಇದರ ಪರಿಣಾಮ ಇಂದು ಜಲಾಶಯದಲ್ಲಿ ಕೇವಲ 80 ಟಿಎಂಸಿ ನೀರು ತುಂಬಿಸಿಕೊಳ್ಳಬೇಕಾಗಿದೆ ಇದರಿಂದ ರೈತರಲ್ಲಿ ಭೀತಿ ಮೂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೇಳಿದರು.


ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ಯಾಂ ಕೆಳಭಾಗದ 19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆ ಈಗಾಗಲೇ ಬಿತ್ತಲಾಗಿದ್ದು, ಮಳೆಮಾತ್ರ ಅವಲಂಬಿಸಿ ಎರಡು ತಿಂಗಳು ಬೆಳೆಯುತ್ತಿದೆ. ಇಂತಹ ಸಮಯದಲ್ಲಿ ಗೇಟುಗಳ ಶಿಥಿಲಾವಸ್ಥೆ ಬಗ್ಗೆ ಸಚಿವ ಶಿವರಾಜ ತಂಗಡಗಿಯವರು ನೀಡುತ್ತಿರುವ ಹೇಳಿಕೆಗಳು ಬೇಜವಾಬ್ದಾರಿ ಮನಸ್ಥಿತಿಯನ್ನು ತೋರಿಸುತ್ತಿವೆ. ತಮ್ಮ ಜವಾಬ್ದಾರಿ‌ ನಿಭಾಯಿಸಲು ಆಗದ ರಾಜ್ಯ ಸರ್ಕಾರದ ಸಚಿವರು ರಾಜಿನಾಮೆ ನೀಡಬೇಕು ಎಂದರು.


ಟೆಂಡರ್ ಪ್ರಕ್ರಿಯೆಯಲ್ಲಿ ತಡಮಾಡಿ, ಕೆಲಸ ಆರಂಭಿಸದೆ ಅವಸರದಲ್ಲಿ ನೀರು ತುಂಬಿಸಿರುವುದು ಸರಕಾರದ ನಿರ್ಲಕ್ಷ್ಯ. ಕಳೆದ ವರ್ಷ 19ನೇ ಗೇಟು ಮುರಿದು ಬಿದ್ದ ಬಳಿಕವೂ ಮೂರೇ ತಿಂಗಳ ಅವಧಿಯಲ್ಲಿ ಗೇಟು ಬದಲಾವಣೆ ಕಾರ್ಯ ಮಾಡಬಹುದಾಗಿತ್ತು. ಆದರೆ ಸರಕಾರ ಗುತ್ತಿಗೆ ನೀಡುವಲ್ಲಿ ತಡಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದರು.


ರಾಜ್ಯ ಸರ್ಕಾರ ಕೇಂದ್ರಕ್ಕೆ ಎಂಟು ಸಲ ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ ಮಾಡಿದೆ ಎಂಬುದು ಬಾಲಿಶ ಹೇಳಿಕೆ. ಕೇಂದ್ರ ಸರಕಾರ ತಾಂತ್ರಿಕ ಸಲಹೆ ಮಾತ್ರ ನೀಡಬಹುದು; ಆಡಳಿತಾತ್ಮಕ ಜವಾಬ್ದಾರಿ ರಾಜ್ಯದ್ದೇ ಆಗಿದೆ. ರೈತರನ್ನು ತಪ್ಪಾಗಿ ಅಂಜಿಸುವುದನ್ನು ನಿಲ್ಲಿಸಿ, ಪ್ರತಿ ಎಕರೆಗೆ ಒಂದು ಲಕ್ಷ ಪರಿಹಾರ ನೀಡಲು ಸಿದ್ಧರಿರಲಿ. ಮುಂದಿನ ವರ್ಷ ಯಾವುದೇ ಕಾರಣಕ್ಕೂ ತುಂಗಭದ್ರಾ ಜಲಾಶಯದ ಗೇಟುಗಳನ್ನು ಅಳವಡಿಸಿ, ರಸಗೊಬ್ಬರವನ್ನು ಸಕಾಲದಲ್ಲಿ ವಿತರಿಸಿ, ಬಫರ್ ಸ್ಟಾಕ್ ನಿರ್ವಹಿಸಿ” ಎಂದು ಆಗ್ರಹಿಸಿದರು.


ಕೊನೆಯಲ್ಲಿ ಅವರು, ಮುಂಗಾರು ಮಳೆಯಿಂದ ಉಂಟಾಗುವ ನಷ್ಟಕ್ಕೆ ಎಸ್ಡಿಆರ್‌ಎಫ್ ನಿಧಿಯಿಂದ ತಕ್ಷಣ ಪರಿಹಾರ ವಿತರಿಸಬೇಕು. ಸರ್ಕಾರ ಗಾಢ ನಿದ್ರೆಯಿಂದ ಎಚ್ಚರವಾಗದಿದ್ದರೆ ರೈತರನ್ನು ಬೀದಿಗೆ ಕರೆದು ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.


ಕೂಡಲೇ ಈ ಭಾಗದ ಎಲ್ಲಾ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ  ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ಎಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ರೈತಮೋರ್ಚಾದ ಅಧ್ಯಕ್ಷ ಸಿದ್ದನಗೌಡ ನೆಲಹಾಳ, ಪ್ರಧಾನ ಕಾರ್ಯದರ್ಶಿ ಜಿ.ಶಂಕರರೆಡ್ಡಿ,  ಸಂತೋಷ ರಾಜಗುರು, ಮಾಧ್ಯಮ ವಕ್ತಾರ ವಿ.ಪಿ.ರೆಡ್ಡಿಯವರು ಉಪಸ್ಥಿತರಿದ್ದರು.

Post a Comment

ನವೀನ ಹಳೆಯದು