ನಗರದ ಹೊರವಲಯದ ರಾಯಲ್ ಫೋರ್ಟ್ ಆವರಣದಲ್ಲಿ ನಡೆದ ರಾಯಚೂರು ಗ್ರಾಮೀಣ ಮಂಡಲ ನೂತನ ಅಧ್ಯಕ್ಷ ಮಹಾಂತೇಶ ಮುಕ್ತಿ ಹಾಗೂ ಪ್ರಧಾನ ಕಾರ್ಯದರ್ಶಿ ನವೀನ್ ಕುರ್ಡಿ ಮತ್ತು ಇತರ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಬಿಜೆಪಿಯಲ್ಲಿ ಜವಾಬ್ದಾರಿ ಎಂದರೆ ಅದು ಅಧಿಕಾರಕ್ಕಾಗಿ ಅಲ್ಲ; ಸಮಾಜದ ನೆಮ್ಮದಿಗಾಗಿ. ಆದರೆ ಕಾಂಗ್ರೆಸ್ 75 ವರ್ಷಗಳ ಆಡಳಿತದಲ್ಲಿ ಪ್ರಜಾಪ್ರಭುತ್ವವನ್ನು ಹಾಳುಮಾಡಿ, ಕುಟುಂಬರಾಜಕಾರಣ ನಡೆಸಿದೆ. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಅಧಿಕಾರದ ನಂತರ ತಮ್ಮ ಕುಟುಂಬದವರಿಗೆ ಅಧಿಕಾರ ನೀಡದಂತೆ, ಪ್ರಧಾನಿ ನರೇಂದ್ರ ಮೋದಿ ಸಹ ಯಾರಿಗೂ ಉತ್ತಾರಾಧಿಕಾರ ನೀಡದ ಪಕ್ಷ ನಮ್ಮದು,” ಎಂದು ಅವರು ತಿಳಿಸಿದರು.
ಅವರು ಮುಂದುವರಿದು, “ಪಶ್ಚಿಮ ಬಂಗಾಳ, ಕೇರಳ, ಜಮ್ಮು-ಕಾಶ್ಮೀರದಂತಹ ರಾಜ್ಯಗಳ ಸವಾಲುಗಳು, ದೇಶದ ಸಮಗ್ರತೆಗೆ ಬೆದರಿಕೆಯಾದ ಸಂದರ್ಭದಲ್ಲೂ ಬಿಜೆಪಿ ಮಾತ್ರ ದೇಶ ಕಟ್ಟುವ ರಾಜಕೀಯ ಮಾಡುತ್ತದೆ. ಮತ್ತೊಬ್ಬರ ಮನೆ ಕಾಯುವುದಿಲ್ಲ, ದೇಶ ಕಟ್ಟುತ್ತದೆ,” ಎಂದು ಸ್ಪಷ್ಟಪಡಿಸಿದರು.
ರಾಜೀವ್ ರಾಜ್ಯ ಸರ್ಕಾರದ ಮೇಲೆ ತೀವ್ರ ಟೀಕೆ ನಡೆಸಿದರು: “ಭೀಮಾ ನದಿತೀರ ಪ್ರವಾಹದಲ್ಲಿ ಜನ ಸಂಕಷ್ಟದಲ್ಲಿದ್ದಾಗ ಕಾಂಗ್ರೆಸ್ ಸರ್ಕಾರ ಮಾನವೀಯತೆಯನ್ನು ಮರೆತಿದೆ. ಕೇಂದ್ರದತ್ತ ಬೆರಳು ತೋರಿಸುವ ಬದಲು, ಯಡಿಯೂರಪ್ಪ ಅವರು ಮಾಡಿದಂತೆ ತಕ್ಷಣ ನೆರವು ನೀಡಬೇಕಿತ್ತು. ರೈತರಿಗೂ ದಲಿತರಿಗೊಂದು ಕಾಂಗ್ರೆಸ್ ಸರ್ಕಾರ ಮಾಡಿದ ಅನ್ಯಾಯ, ಮೋಸ ಹಿಂದೆ ಯಾರೂ ಮಾಡಿಲ್ಲ,” ಎಂದರು.
ಮಾಜಿ ವಿಧಾನಪರಿಷತ್ ಸದಸ್ಯ ಎನ್. ಶಂಕ್ರಪ್ಪ ಮಾತನಾಡಿ, “ಗ್ರಾಮಾಂತರ ಪ್ರದೇಶದಲ್ಲಿ ಮೊದಲ ಬಾರಿಗೆ ಬಿಜೆಪಿ ಅರಳಿದರೂ ಒಳಜಗಳಗಳಿಂದ ಸೋಲು ಕಂಡಿದ್ದೇವೆ. ಮುಂದಿನ ಚುನಾವಣೆಗೆ ಸಂಘಟನೆ ಬಲಪಡಿಸಬೇಕು,” ಎಂದು ಸಲಹೆ ನೀಡಿದರು.
ಶಾಸಕ ಡಾ. ಶಿವರಾಜ್ ಹೇಳಿದರು: “ಪಕ್ಷವನ್ನು ಕಟ್ಟಲು, ಅಧಿಕಾರ ತರುವುದಕ್ಕೆ ಕಾರ್ಯಕರ್ತರ ಶ್ರಮ ಅಗತ್ಯ. ಮುಂದಿನ ಚುನಾವಣೆಯಲ್ಲಿ ತಿಪ್ಪರಾಜು ಅವರ ಗೆಲುವನ್ನು ಖಚಿತಗೊಳಿಸಬೇಕು. ಕಳೆದ ಬಾರಿ ‘40% ಕಮಿಷನ್’ ಸುಳ್ಳು ಆರೋಪ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಈಗ 80% ಕಮಿಷನ್ ಪಡೆಯುತ್ತಿದೆ,” ಎಂದು ಆಪಾದಿಸಿದರು.
ತಿಪ್ಪರಾಜು ಹವಾಲ್ದಾರ್ ಭಾವನಾತ್ಮಕವಾಗಿ ಮಾತನಾಡಿ, “ಕಳೆದ ಸೋಲು ನನ್ನ ತಪ್ಪು, ಕಾರ್ಯಕರ್ತರದ್ದು ಅಲ್ಲ. ಈಗ 10 ವರ್ಷದ ವನವಾಸ ಮುಗಿದಿದೆ. ಮೂರನೇ ಬಾರಿ ಕಮಲ ಅರಳಿಸುವುದು ನಮ್ಮ ಗುರಿ,” ಎಂದರು.
ನೂತನ ಅಧ್ಯಕ್ಷ ಮಹಾಂತೇಶ ಮುಕ್ತಿ ಹೇಳಿದರು: “ಹಿರಿಯರು ನನ್ನ ಮೇಲೆ ಇಟ್ಟ ವಿಶ್ವಾಸ ಉಳಿಸಲು 187 ಹಳ್ಳಿಗಳ 220ಕ್ಕೂ ಹೆಚ್ಚು ಬೂತ್‌ಗಳಲ್ಲಿ, 8 ಜಿಲ್ಲಾ ಪಂಚಾಯತಿ ಹಾಗೂ 27 ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲಿ ಸಂಘಟನೆ ಬಲಪಡಿಸುತ್ತೇನೆ. ತಿಪ್ಪರಾಜು ಅವರ ಗೆಲುವು ನಮ್ಮ ಗುರಿ,” ಎಂದು ಭರವಸೆ ನೀಡಿದರು.
ನೂತನ ಪ್ರಧಾನ ಕಾರ್ಯದರ್ಶಿ ಜಿ.ಎಚ್. ನವೀನಕುಮಾರ್ ಕುರ್ಡಿ ಹೇಳಿದರು: “ಗ್ರಾಮಾಂತರದಲ್ಲಿ ಬಿಜೆಪಿ ಗೆಲುವಿಗಾಗಿ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ದುಡಿಯೋಣ. ರಾಜ್ಯದ ನಾಯಕರು ನಮಗೆ ಬಲ ತುಂಬಬೇಕು,” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮಾಜಿ ಸಂಸದರು ರಾಜಾ ಅಮರೇಶ್ವರ ನಾಯಕ, ಬಿ.ವಿ. ನಾಯಕ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ದೇವದುರ್ಗದ ಅಧ್ಯಕ್ಷ ಶರಣಬಸವ ಪಾಟೀಲ, ಮುಖಂಡರಾದ ಜಗದೀಶ ವಕೀಲ, ಶಂಕರರೆಡ್ಡಿ, ಸುಲೋಚನಾ ಸೇರಿದಂತೆ ಹಲವರು ಪಕ್ಷ ಸಂಘಟನೆ ಮತ್ತು ಕಾಂಗ್ರೆಸ್ ಸರ್ಕಾರದ ವೈಫಲ್ಯ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಸಿದ್ದನಗೌಡ ನೆಲಹಾಳ್, ಅಚ್ಯುತ್ ರೆಡ್ಡಿ, ರವೀಂದ್ರ ಜಲ್ದಾರ, ಕೇಶವರೆಡ್ಡಿ, ರಾಜಕುಮಾರ, ಸಂತೋಷ, ನಾರಾಯಣರಾವ್ ಕುಲಕರ್ಣಿ, ಕಡಗೋಲು ಆಂಜನೇಯ್ಯ, ವರಪ್ರಸಾದ್ ರೆಡ್ಡಿ ತಲಮಾರಿ, ಶಂಕರಗೌಡ ಅಲ್ಕೂರು, ಮರೇಗೌಡ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿನಾಯಕರಾವ್, ಜಂಬಣ್ಣ ನೀಲಗಲ್ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್ ಪೋಸ್ಟ್ ಮಾಡಿ